71 ನೇ ವಿಶ್ವಸುಂದರಿ ಸ್ಪರ್ಧೆ: ಕಿರೀಟ ಮುಡಿಗೇರಿಸಿಕೊಂಡ ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೊವಾ

ಮುಂಬೈ: ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೊವಾ ಅವರು 28 ವರ್ಷಗಳ ಅಂತರದ ನಂತರ ಭಾರತಕ್ಕೆ ಮರಳಿದ ವಿಶ್ವ ಸುಂದರಿ (Miss World) 2024 ಸ್ಪರ್ಧೆಯ 71 ನೇ ಆವೃತ್ತಿಯನ್ನು ಗೆದ್ದಿದ್ದಾರೆ. ಮುಂಬೈನಲ್ಲಿ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಗ್ರಾಂಡ್ ಫಿನಾಲೆ ನಡೆಯಿತು.

ಫೆಮಿನಾ ಮಿಸ್ ಇಂಡಿಯಾ 2022 ರ ವಿಜೇತೆ ಸಿನಿ ಶೆಟ್ಟಿ ಈ ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದರು. ಪ್ರಪಂಚದಾದ್ಯಂತದ 112 ಸ್ಪರ್ಧಿಗಳನ್ನು ಒಳಗೊಂಡಿದ್ದ ಸ್ಪರ್ಧೆಯಲ್ಲಿ ಟಾಪ್ ಎಂಟರಲ್ಲಿ ಸಿನಿಶೆಟ್ಟಿ ಇದ್ದರೂ ವಿಶ್ವಸುಂದರಿ ಕಿರೀಟ ಮುಡಿಗೇರಿಸಿಕೊಳ್ಳಲಾಗಲಿಲ್ಲ.

ಲೆಬನಾನ್‌ನ ಯಾಸ್ಮಿನ್ ಅಜಯ್‌ಟೌನ್, ಟ್ರಿನಿಡಾಡ್ ಮತ್ತು ಟೊಬಾಗೊದ ಅಚೆ ಅಬ್ರಹಾಮ್ಸ್ ಮತ್ತು ಬೋಟ್ಸ್‌ವಾನಾದ ಲೆಸೆಗೊ ಚೊಂಬೊ ಕ್ರಿಸ್ಟಿನಾ ಜೊತೆ ಟಾಪ್ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಿದರೂ ಅಂತಿಮವಾಗಿ ಕ್ರಿಸ್ಟಿನಾ ಪಿಸ್ಕೊವಾ ವಿಶ್ವಸುಂದರಿಯಾಗಿ ಆಯ್ಕೆಯಾದರು.

ಈ ಸಂದರ್ಭದಲ್ಲಿ, ರಿಲಯನ್ಸ್ ಫೌಂಡೇಶನ್‌ನ ಅಧ್ಯಕ್ಷೆ ಮತ್ತು ಸಂಸ್ಥಾಪಕಿ ನೀತಾ ಮುಖೇಶ್ ಅಂಬಾನಿ ಅವರ ದತ್ತಿ ಕಾರ್ಯಕ್ಕಾಗಿ ವಿಶ್ವ ಸುಂದರಿ ಮಾನವೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.