ತೌಕ್ತೆ ಚಂಡಮಾರುತ ಎಫೆಕ್ಟ್: ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ, ತೀವ್ರಗೊಂಡ ಕಡಲ್ಕೊರೆತ

ಉಡುಪಿ: ವಾಯುಭಾರ ಕುಸಿತದಿಂದ ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ತೌಕ್ತೆ ಚಂಡಮಾರುತ ಪರಿಣಾಮ ಉಡುಪಿ ಜಿಲ್ಲೆಯಾದ್ಯಂತ ಇಂದು ಧಾರಾಕಾರವಾಗಿ ಮಳೆ ಸುರಿದಿದೆ.

ಉಡುಪಿ, ಕಾರ್ಕಳ, ಕುಂದಾಪುರ, ಬೈಂದೂರು ಹಾಗೂ ಕಾಪು ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಇಂದು ಮುಂಜಾನೆ ಮೂರು ಗಂಟೆಗೆ ಶುರುವಾದ ಗಾಳಿಮಳೆ ಕೆಲಕಾಲ ಜೋರಾಗಿ ಸುರಿದಿದೆ. ಬೆಳಿಗ್ಗೆ ಕೊಂಚ ಬಿಡುವುಕೊಟ್ಟಿದ್ದ ಮಳೆ, 11 ಗಂಟೆಯ ಬಳಿಕ ಧಾರಾಕಾರವಾಗಿ ಸುರಿದಿದೆ.

ಕುಂದಾಪುರ, ಬೈಂದೂರು ಹಾಗೂ ಕಾಪು ತಾಲೂಕಿನಲ್ಲಿ ಸಮುದ್ರದಲೆಗಳ ಅಬ್ಬರಕ್ಕೆ ಕಡಲ್ಕೊರೆತ ಉಂಟಾಗಿದೆ. ಸಮುದ್ರದಲ್ಲಿ ಭಾರೀ ಗಾಳಿ ಬೀಸುತ್ತಿದ್ದು, ಈ ಹಿನ್ನೆಲೆಯಲ್ಲಿ ಮೀನುಗಾರಿಕೆ ಸ್ಥಗಿತಗೊಳಿಸಲಾಗಿದೆ. ಮೀನುಗಾರಿಕಾ ಬೋಟ್ ಗಳೆಲ್ಲವೂ ಬಂದರುಗಳಲ್ಲಿ ಲಂಗರು ಹಾಕಿವೆ.

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಜಿಲ್ಲೆಯಲ್ಲಿ ನಾಳೆ (ಮೇ.16) ಬೆಳಿಗ್ಗೆಯವರೆಗೆ ಅತ್ಯಂತ ಭಾರೀ (204.5ಮಿ.ಮೀ.ಗಿಂತ ಅಧಿಕ) ಮಳೆಯಾಗುವ ಸಾಧ್ಯತೆ ಇದೆ. ನಂತರ ಮಳೆಯ ಪ್ರಮಾಣ ಕಡಿಮೆಯಾಗಲಿದ್ದು, ಮುಂದಿನ ಎರಡು ದಿನ ಭಾರೀ ಮಳೆ ಸುರಿಯುವ ಸಾಧ್ಯತೆಯನ್ನು ತಿಳಿಸಲಾಗಿದೆ.

ಕರಾವಳಿಯಲ್ಲಿ ತಾಸಿಗೆ 50-60 ಕಿ.ಮೀ.ಯಿಂದ 70 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಕಡಲು ಪ್ರಕ್ಷುಬ್ಧಗೊಂಡಿರುವುದರಿಂದ ಮೇ 18ರವರೆಗೆ ಮೀನುಗಾರರು ಕಡಲಿಗಿಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.