ಕಚ್‌ನಲ್ಲಿ ಚಂಡಮಾರುತ ಆತಂಕ :3.5 ತೀವ್ರತೆಯ ಭೂಕಂಪನ

ಕಚ್ (ಗುಜರಾತ್​): ರಕ್ಕಸ ಬಿಪರ್‌ಜೋಯ್ ಚಂಡಮಾರುತದ ಭೀತಿಯ ನಡುವೆಯೇ ಗುಜರಾತ್​ನ ಕಚ್‌ನಲ್ಲಿ ಬುಧವಾರ ಭೂಕಂಪನ ಸಂಭವಿಸಿದೆ. ಗುಜರಾತ್​ನ ಕಚ್‌ನಲ್ಲಿ ಚಂಡಮಾರುತದ ಆತಂಕದ ಮಧ್ಯೆ ಭೂಕಂಪದ ಭೀತಿ ಸೃಷ್ಟಿಯಾಗಿದೆ. ಇಂದು ಸಂಜೆ ಕಚ್‌ ಸಮೀಪ ಭಚೌ ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪ ದಾಖಲಾಗಿದೆ.

ಇಲ್ಲಿನ ಭಚೌ ಪ್ರದೇಶದ ಪಶ್ಚಿಮ – ನೈಋತ್ಯದ 5 ಕಿಲೋಮೀಟರ್ ದೂರದಲ್ಲಿ ಕಂಪನ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಸಂಜೆ 5.15ರ ಸುಮಾರಿಗೆ ಘಟನೆ ನಡೆದಿದೆ. ಇದರ ಕೇಂದ್ರಬಿಂದು 23.291 ಅಕ್ಷಾಂಶ ಮತ್ತು 70.293 ರೇಖಾಂಶದಲ್ಲಿದ್ದು, 18.5 ಕಿಲೋಮೀಟರ್ ಆಳದಲ್ಲಿತ್ತು ಎಂದು ಗುಜರಾತ್ ಸರ್ಕಾರದ ಭೂಕಂಪನ ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ. ಇತ್ತೀಚೆಗೆ ಎಂದರೆ ಮೇ ತಿಂಗಳಲ್ಲಿ ಕಚ್‌ನ ಖಾವ್ಡಾ ಪ್ರದೇಶದಲ್ಲಿ ಭೂಕಂಪ ಉಂಟಾಗಿತ್ತು. ಆಗ ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.2ರಷ್ಟು ದಾಖಲಾಗಿತ್ತು.

54 ತಾಲೂಕಲ್ಲಿ ಭಾರಿ ಮಳೆ: ನಾಳೆಗುಜರಾತ್​ ಕರಾವಳಿಗೆ ಬಿಪರ್‌ಜೋಯ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ. ಇದರ ಹಿನ್ನೆಲೆಯಲ್ಲಿ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದು ಅಪಾಯ ಎದುರಿಸಲು ಸರ್ವಸನ್ನದ್ಧ ಸ್ಥಿತಿಯಲ್ಲಿದೆ. ಮತ್ತೊಂದೆಡೆ, ಸೌರಾಷ್ಟ್ರ ಹಾಗೂ ಕಚ್ ಪ್ರದೇಶದ ಕೆಲವು ಭಾಗಗಳಲ್ಲಿ ಬಲವಾದ ಗಾಳಿಯೊಂದಿಗೆ ಭಾರಿ ಮಳೆ ಸುರಿಯುತ್ತಿದೆ.

ಕಳೆದ 24 ಗಂಟೆಗಳಲ್ಲಿ ಸೌರಾಷ್ಟ್ರ ಮತ್ತು ಕಚ್ ಜಿಲ್ಲೆಗಳಾದ್ಯಂತ 54 ತಾಲೂಕುಗಳಲ್ಲಿ 10 ಮಿ.ಮೀ.ಗಿಂತ ಹೆಚ್ಚು ಮಳೆಯಾಗಿದೆ. ದ್ವಾರಕಾ, ರಾಜ್‌ಕೋಟ್, ಜಾಮ್‌ನಗರ, ಪೋರಬಂದರ್ ಮತ್ತು ಜುನಾಗಢ್ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹಾಗೂ ರಾಜ್ಯ ತುರ್ತು ಪರಿಸ್ಥಿತಿ ನಿರ್ವಹಣಾ ಕೇಂದ್ರ (ಎಸ್‌ಇಒಸಿ) ತಿಳಿಸಿದೆ. ಅದರಲ್ಲೂ, ದ್ವಾರಕಾ ಜಿಲ್ಲೆಯ ಖಂಬಲಿಯಾ ತಾಲೂಕಿನಲ್ಲಿ 121 ಮಿ.ಮೀ ಮಳೆಯಾಗಿದ್ದರೆ, ದ್ವಾರಕಾದಲ್ಲಿ 92 ಮಿಮೀ ಮತ್ತು ಕಲ್ಯಾಣಪುರದಲ್ಲಿ 70 ಮಿಮೀ ಮಳೆಯಾಗಿದೆ ಎಂದು ಎಸ್‌ಇಒಸಿ ವರದಿ ಹೇಳಿದೆ.

ಈಗಾಗಲೇ ಸ್ಥಳಾಂತರಗೊಂಡ 50 ಸಾವಿರ ಜನರ ಪೈಕಿ ಸುಮಾರು 18 ಸಾವಿರ ಜನರನ್ನು ಕಚ್ ಜಿಲ್ಲೆಯ ಆಶ್ರಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇತರರನ್ನು ಜುನಾಗಢ್, ಜಾಮ್‌ನಗರ, ಪೋರಬಂದರ್, ದ್ವಾರಕಾ, ಮೋರ್ಬಿ ಮತ್ತು ರಾಜ್‌ಕೋಟ್‌ನಿಂದ ಸ್ಥಳಾಂತರಿಸಲಾಗಿದೆ. ಜೊತೆಗೆ ಎನ್‌ಡಿಆರ್‌ಎಫ್‌ನ 15 ತಂಡಗಳು (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ), ಎಸ್‌ಡಿಆರ್‌ಎಫ್‌ನ 12 ತಂಡಗಳು (ರಾಜ್ಯ ವಿಪತ್ತು ನಿರ್ವಹಣಾ ಪಡೆ), ರಾಜ್ಯ ರಸ್ತೆ ಮತ್ತು ಕಟ್ಟಡ ಇಲಾಖೆಯ 115 ತಂಡಗಳು ಮತ್ತು ರಾಜ್ಯ ವಿದ್ಯುತ್ ಇಲಾಖೆಯ 397 ತಂಡಗಳನ್ನು ಕರಾವಳಿಯ ವಿವಿಧ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

50 ಸಾವಿರ ಜನರ ಸ್ಥಳಾಂತರ: ಚಂಡಮಾರುತವು ಪ್ರಸ್ತುತ ಕಚ್‌ನಿಂದ ಸುಮಾರು 290 ಕಿ.ಮೀ ದೂರದಲ್ಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಸುಮಾರು 50,000 ಜನರನ್ನು ತಾತ್ಕಾಲಿಕ ಆಶ್ರಯಕ್ಕೆ ಸ್ಥಳಾಂತರಿಸಿದ್ದೇವೆ. ಜನರ ಸ್ಥಳಾಂತರ ಮುಂದುವರೆದಿದ್ದು, ಇನ್ನೂ ಐದು ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು ಎಂದು ರಾಜ್ಯ ಪರಿಹಾರ ಆಯುಕ್ತ ಅಲೋಕ್ ಕುಮಾರ್ ಪಾಂಡೆ ತಿಳಿಸಿದ್ದಾರೆ.