ಆನ್‌ಲೈನ್‌ನಲ್ಲಿ ಖರೀದಿಸಿದ ಮೊಸರು ಪ್ಯಾಕೆಟ್ ಸೋರಿಕೆ, ಹಣ ರಿಫಂಡ್ ಮಾಡಿ ಎಂದು ಕೇಳಿದ ಗೃಹಿಣಿಗೆ ರೂ. 98 ಸಾವಿರ ವಂಚನೆ ಮಾಡಿದರು ಸೈಬರ್ ಕಳ್ಳರು!

ಬೆಂಗಳೂರು: ಆನ್‌ಲೈನ್‌ನಲ್ಲಿ ಖರೀದಿಸಿದ ಮೊಸರು ಪ್ಯಾಕೆಟ್ ಸೋರಿಕೆಯಾಗಿದ್ದಕ್ಕೆ ಹಣ ವಾಪಸ್ ಪಡೆಯಲು ಮುಂದಾದ ಗೃಹಿಣಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ₹98 ಸಾವಿರ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ನಗರದ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ (ಸೆನ್) ಪ್ರಕರಣ ದಾಖಲಾಗಿದೆ.

ವಸಂತ ನಗರದ 56 ವರ್ಷದ ಗೃಹಿಣಿಯೊಬ್ಬರು ಅಕ್ಟೋಬರ್ 17ರಂದು ಬ್ಲಿಂಕಿಟ್ ಮೂಲಕ ಮೊಸರು ಆರ್ಡರ್ ಮಾಡಿದ್ದರು. ಡೆಲಿವರಿ ಪಡೆದ ಬಳಿಕ ಪ್ಯಾಕೆಟ್ ಸೋರಿಕೆಯಾಗಿರುವುದು ಗಮನಕ್ಕೆ ಬಂದಿದೆ. ಈ ಕುರಿತು ದೂರು ನೀಡಿ ಹಣ ವಾಪಸ್ ಪಡೆಯಲು ಮುಂದಾದ ಅವರು, ಗೂಗಲ್‌ನಲ್ಲಿ ಗ್ರಾಹಕ ಸೇವಾ ಕೇಂದ್ರದ (ಕಸ್ಟಮರ್ ಕೇರ್) ಸಂಖ್ಯೆಯನ್ನು ಹುಡುಕಿದ್ದಾರೆ.

ಸರ್ಚ್‌ನಲ್ಲಿ ದೊರೆತ ಸಂಖ್ಯೆಗೆ ಕರೆ ಮಾಡಿದ ಮಹಿಳೆಗೆ ಅಪರಿಚಿತ ವ್ಯಕ್ತಿಯೊಬ್ಬ ಸಂಪರ್ಕಿಸಿದ್ದಾನೆ. ಬಳಿಕ ಆತ ಕಳುಹಿಸಿದ ಲಿಂಕ್ ಮೂಲಕ ಸೋರಿಕೆಯಾದ ಮೊಸರು ಪ್ಯಾಕೆಟ್‌ನ ಫೋಟೊವನ್ನು ಮಹಿಳೆ ಅಪ್‌ಲೋಡ್ ಮಾಡಿದ್ದಾರೆ ಎನ್ನಲಾಗಿದೆ.

ರಿಫಂಡ್ ಹೆಸರಿನಲ್ಲಿ ಬ್ಯಾಂಕ್ ಖಾತೆಗೆ ಕನ್ನ!

ನಂತರ ಅಪರಿಚಿತ ವ್ಯಕ್ತಿ ಕರೆ ಮಾಡಿ ಹಣವನ್ನು ವಾಪಸ್ ನೀಡುವುದಾಗಿ ತಿಳಿಸಿದ್ದಾನೆ. ಅಲ್ಲದೆ, ಗೂಗಲ್ ಪೇ ಪರಿಶೀಲಿಸುವಂತೆ ಸೂಚಿಸಿದ್ದಾನೆ. ಆದರೆ, ಮಹಿಳೆ ಮೊಬೈಲ್ ಪರಿಶೀಲಿಸಿದಾಗ ಗೂಗಲ್ ಪೇ ಆ್ಯಪ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಇದೇ ವೇಳೆ ಅವರ ಬ್ಯಾಂಕ್ ಆಫ್ ಬರೋಡಾ ಖಾತೆಯಿಂದ ₹98 ಸಾವಿರ ಕಡಿತವಾಗಿರುವುದು ತಿಳಿದುಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ರಿಫಂಡ್ ನೀಡುವ ನೆಪದಲ್ಲಿ ಅಪರಿಚಿತರು ವಂಚಿಸಿದ್ದಾರೆ ಎಂದು ಆರೋಪಿಸಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೆನ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಾರ್ವಜನಿಕರು ಎಚ್ಚರಿಕೆ ವಹಿಸಿ: ಆನ್‌ಲೈನ್ ಖರೀದಿಯಲ್ಲಿ ಸಮಸ್ಯೆ ಎದುರಾದಾಗ ಗೂಗಲ್‌ನಲ್ಲಿ ಸಿಗುವ ಅಪರಿಚಿತ ಕಸ್ಟಮರ್ ಕೇರ್ ಸಂಖ್ಯೆಗಳ ಬದಲಿಗೆ ಅಧಿಕೃತ ಆ್ಯಪ್ ಅಥವಾ ವೆಬ್‌ಸೈಟ್‌ನಲ್ಲಿರುವ ಸಂಪರ್ಕ ಮಾರ್ಗವನ್ನೇ ಬಳಸಿ. ಅಪರಿಚಿತರು ಕಳುಹಿಸುವ ಲಿಂಕ್‌ಗಳನ್ನು ತೆರೆಯುವಾಗ ಎಚ್ಚರಿಕೆ ವಹಿಸಿ.