ಬಿಸಿಲು ಹೆಚ್ಚಾದಾಗ ನಮ್ಮ ದೇಹಕ್ಕೆ ಮೊಸರು ಒಳ್ಳೆದೋ? ಮಜ್ಜಿಗೆ ಒಳ್ಳೆದೋ, ನೀವು ತಿಳಿದುಕೊಂಡಿರಲೇಬೇಕಾದ ಸಂಗತಿಗಳಿವು!

ಮೊಸರು ಕುಡಿದರೆ ಏನಾಗುತ್ತದೆ?

ಮೊಸರಿನಲ್ಲಿ ಪ್ರೋಟೀನ್ ಹೆಚ್ಚು ಇರುವುದರಿಂದ ಇದು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಜೊತೆಗೆ ಇದರಲ್ಲಿ ಇರುವ ಪ್ರೋಬಯಾಟಿಕ್ಸ್‌ (ಉತ್ತಮ ಬ್ಯಾಕ್ಟೀರಿಯಾ) ನಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸುತ್ತವೆ. ಜೀರ್ಣಕ್ರಿಯೆ ಸರಿಯಾಗಿರಲು ಮೊಸರು ಸಹಕಾರಿ.

ಮೊಸರು ತಿಂದರೆ ಹೊಟ್ಟೆ ದೀರ್ಘಕಾಲ ತುಂಬಿದಂತೆ ಅನುಭವವಾಗುತ್ತದೆ. ಆದ್ದರಿಂದ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಇದು ಒಳ್ಳೆಯ ಆಯ್ಕೆ. ಮೊಸರಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ಇದು ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ಗ್ಯಾಸ್ಟ್ರಿಕ್ ಮತ್ತು ಅಸಿಡಿಟಿ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹ ಮೊಸರು ಸಹಾಯ ಮಾಡುತ್ತದೆ.

ಮಧ್ಯಾಹ್ನದ ಊಟದ ಸಮಯದಲ್ಲಿ ಮೊಸರು ತಿನ್ನುವುದು ಉತ್ತಮ. ಅನ್ನ, ಖಿಚಡಿ, ಪರಾಠ ಮುಂತಾದ ಆಹಾರಗಳೊಂದಿಗೆ ಮೊಸರು ಬೆರೆಸಿ ತಿನ್ನಬಹುದು. ಮಕ್ಕಳು, ವೃದ್ಧರು ಮತ್ತು ಹೆಚ್ಚು ಹಸಿವು ಇರುವವರಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ. ಆದರೆ ಚಳಿಗಾಲದಲ್ಲಿ ಮೊಸರು ತಿನ್ನುವಾಗ ಸ್ವಲ್ಪ ಜಾಗರೂಕತೆಯಿರಬೇಕು.

ಮಜ್ಜಿಗೆ ಕುಡಿದರೆ?

ಮಜ್ಜಿಗೆ ಮೊಸರಿಗಿಂತ ಹಗುರವಾಗಿದ್ದು, ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಮೊಸರನ್ನು ನೀರಿನಲ್ಲಿ ಬೆರೆಸಿ ಮಜ್ಜಿಗೆ ತಯಾರಿಸಲಾಗುತ್ತದೆ. ರುಚಿಗಾಗಿ ಉಪ್ಪು, ಹುರಿದ ಜೀರಿಗೆ ಪುಡಿ ಮತ್ತು ಕರಿಮೆಣಸು ಸೇರಿಸಬಹುದು.

ಬೇಸಿಗೆಯಲ್ಲಿ ಮಜ್ಜಿಗೆ ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಕ್ಯಾಲೊರಿಗಳು ಕಡಿಮೆ ಇರುವುದರಿಂದ ತೂಕ ನಿಯಂತ್ರಿಸಲು ಬಯಸುವವರಿಗೆ ಇದು ಉತ್ತಮ ಪಾನೀಯ. ಮಜ್ಜಿಗೆ ಜೀರ್ಣಕ್ರಿಯೆಯನ್ನು ಸುಧಾರಿಸಿ, ಮಲಬದ್ಧತೆ ಮತ್ತು ಅಸಿಡಿಟಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಮಜ್ಜಿಗೆಯಲ್ಲಿ ಎಲೆಕ್ಟ್ರೋಲೈಟ್ಸ್‌ ಇರುವುದರಿಂದ ಇದು ದೇಹದಲ್ಲಿ ನೀರಿನ ಕೊರತೆಯನ್ನು ತಪ್ಪಿಸುತ್ತದೆ. ಹೆಚ್ಚು ಊಟ ಮಾಡಿದ ನಂತರ ಮಜ್ಜಿಗೆ ಕುಡಿಯುವುದರಿಂದ ಹೊಟ್ಟೆ ಹಗುರವಾಗುತ್ತದೆ.

ಯಾವುದು ಉತ್ತಮ – ಮೊಸರು ಅಥವಾ ಮಜ್ಜಿಗೆ?

ಮೊಸರು ಮತ್ತು ಮಜ್ಜಿಗೆ ಎರಡೂ ಆರೋಗ್ಯಕರವೇ. ಆದರೆ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಆಯ್ಕೆ ಮಾಡಬಹುದು. ಹೆಚ್ಚು ಪೋಷಕಾಂಶ, ಪ್ರೋಟೀನ್ ಮತ್ತು ಹೊಟ್ಟೆ ತುಂಬುವ ಆಹಾರ ಬೇಕಾದರೆ ಮೊಸರು ಉತ್ತಮ. ಹಗುರ, ತಂಪು ನೀಡುವ ಮತ್ತು ಜೀರ್ಣಕ್ರಿಯೆಗೆ ಸಹಾಯಕವಾದ ಪಾನೀಯ ಬೇಕಾದರೆ ಮಜ್ಜಿಗೆ ಉತ್ತಮ ಆಯ್ಕೆ.ಎರಡನ್ನೂ ಕುಡಿಯೋದು ಬೇಡ. ಯಾವುದಾದರೂ ಒಂದನ್ನು ಆಯ್ದುಕೊಂಡು ಹಿತಮಿತವಾಗಿ ಕುಡಿಯಿರಿ ಸಾಕು