ಸಾಂಸ್ಕೃತಿಕ ಚಟುವಟಿಕೆಗಳು ಮಾನಸಿಕ ಆರೋಗ್ಯ ವೃದ್ಧಿಯ ಶಕ್ತಿ: ಡಾ.ಗಣನಾಥ ಎಕ್ಕಾರು

ಉಡುಪಿ: ಮನುಷ್ಯನ ದೇಹಕ್ಕೆ ಮಾನಸಿಕ ದೈಹಿಕ ಹಾಗೂ ಸಾಂಸ್ಕೃತಿಕ ಅಂಶಗಳು ಅತೀ ಅವಶ್ಯ. ಈ ಮೂರು ವಿಚಾರವನ್ನು ಹೊಂದಿದಾಗ ವ್ಯಕ್ತಿ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ. ಮಾನಸಿಕ ಆರೋಗ್ಯವನ್ನು ವೃದ್ಧಿಸುವ ಶಕ್ತಿಯನ್ನು ಸಾಂಸ್ಕೃತಿಕ ಚಟುವಟಿಕೆಗಳು ಹೊಂದಿದೆ ಎಂದು ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಹೇಳಿದರು.

ಅವರು ಭಾನುವಾರ ಮಲ್ಪೆ ಬೀಚ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ, ಸಿಂಫನಿ ಸಂಗೀತ ಬಳಗ ಹಾಗೂ ಭ್ರಾಮರಿ ಜನಪದ ಕಲಾ ತಂಡ ಉಡುಪಿ ಇವರ ಸಹಯೋಗದಲ್ಲಿ ನಡೆದ ಕಲಾ ನಡಿಗೆ ನಿಮ್ಮ ಬಳಿಗೆ ಸುಗಮ ಸಂಗೀತ ಹಾಗೂ ಜನಪದ ನೃತ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕರಾವಳಿ ಪ್ರದೇಶ ಜನಪದ ಸಂಪತ್ತನ್ನು ಆಗಾಧವಾಗಿ ಹೊಂದಿದೆ. ಇತ್ತೀಚಿನ ಕಾಲಘಟ್ಟದಲ್ಲಿ ಜಾನಪದ ಪ್ರಕಾರಗಳು ಅನೇಕ ಕಾರಣದಿಂದಾಗಿ ದೂರ ಉಳಿದಿದ್ದು, ಆ ನಿಟ್ಟಿನಲ್ಲಿ “ಕಲಾ ನಡಿಗೆ ನಿಮ್ಮ ಬಳಿಗೆ” ಕಾರ್ಯಕ್ರಮವನ್ನು ಸರಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಕರ್ನಾಟಕದ ಕಲಾ ಸಂಪತ್ತನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.

ಸಿಂಫನಿ ಸಂಗೀತ ಬಳಗದಿಂದ ಸುಗಮ ಸಂಗೀತ ಹಾಗೂ ಜನಪದ ಗೀತ ಗಾಯನ, ಭ್ರಾಮರಿ ಜನಪದ ಕಲಾ ತಂಡದ ವತಿಯಿಂದ ಕಂಗೀಲು ನೃತ್ಯ ಪ್ರದರ್ಶನಗೊಂಡಿತು.

ಕಾರ್ಯಕ್ರಮದಲ್ಲಿ ಮಲ್ಪೆ ಬಿಲ್ಲವ ಸಂಘದ ಅಧ್ಯಕ್ಷ ಗೋಪಾಲ್ ಸಿ ಬಂಗೇರ, ನಗರಸಭಾ ನಾಮ ನಿರ್ದೇಶಕ ಸದಸ್ಯ ಯಾದವ್ ಅಮಿನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಜನಪದ ಕಲಾವಿದ ಶಂಕರ್ ದಾಸ್ ಚಡ್ಕಳ ನಿರೂಪಿಸಿ, ವಂದಿಸಿದರು.