ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಿರ್ದೇಶನದ ವಿರುದ್ದ ಮೇಲ್ಮನವಿ: ಸಿಆರ್‌ಝಡ್ ಮರಳು ಪರವಾನಿಗೆದಾರರ ಒಕ್ಕೂಟ ಚಿಂತನೆ

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮರಳು ತೆಗೆಯುವ ಕುರಿತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಸರ್ಕಾರಕ್ಕೆ ನೀಡಿರುವ ನಿರ್ದೇಶನದ ವಿರುದ್ಧ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ದಕ್ಷಿಣ ಕನ್ನಡ ಜಿಲ್ಲಾ ಸಿಆರ್‌ಝಡ್ ಮರಳು ಪರನಾನಿಗೆದಾರರ ಒಕ್ಕೂಟದ ಸದಸ್ಯರು ಚಿಂತನೆ ನಡೆಸುತ್ತಿದ್ದಾರೆ ಎಂದು  ಫೆಡರೇಶನ್ ಸಲಹೆಗಾರ ಮಯೂರ್ ಉಳ್ಳಾಲ್ ಹೇಳಿದ್ದಾರೆ.

ಜೂನ್ 9 ರಂದು ಉಡುಪಿಯಲ್ಲಿ, ಉಡುಪಿ ಮತ್ತು ಕಾರವಾರದ ಮರಳು ಪರವಾನಗಿದಾರರ ಸಭೆ ಕರೆದು ಮುಂದಿನ ಕಾನೂನು ಹೋರಾಟದ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಸಿಆರ್‌ಝಡ್‌ ವ್ಯಾಪ್ತಿಯಿಂದ ತೆಗೆದ ಮರಳನ್ನು ಸಾಗಿಸದಂತೆ ಸರ್ಕಾರಕ್ಕೆ ಎನ್‌ಜಿಟಿಯು ನೀಡಿರುವ ನಿರ್ದೇಶನದ ಮೇರೆಗೆ ದ.ಕ ಮತ್ತು ಉಡುಪಿ ಜಿಲ್ಲಾಧಿಕಾರಿಗಳು ಸಿಆರ್‌ಝಡ್‌ ವ್ಯಾಪ್ತಿಯ ಮರಳು ತೆಗೆಯುವಿಕೆ ಮತ್ತು  ಸಾಗಾಣಿಕೆಯನ್ನು ನಿಷೇಧಿಸಿದ್ದಾರೆ.

“ಸಿಆರ್‌ಝಡ್‌ನಲ್ಲಿ ಮರಳನ್ನು ತೆರವುಗೊಳಿಸಲು ಜಿಲ್ಲಾಡಳಿತ 148 ಮಂದಿಗೆ ಪರವಾನಗಿ ನೀಡಿತ್ತು. ನಾವು ಸರ್ಕಾರಕ್ಕೆ ರಾಯಧನದ ಜೊತೆಗೆ ಅರ್ಜಿ ಶುಲ್ಕವಾಗಿ 10,000 ರೂಪಾಯಿಗಳನ್ನು ಪಾವತಿಸಿದ್ದೇವೆ ಮತ್ತು ದೋಣಿಗಳಿಗೆ ಜಿಪಿಎಸ್ ಮತ್ತು ಮರಳು ಸಾಗಿಸುವ ಲಾರಿಗಳಿಗೆ ಜಿಪಿಎಸ್ ಅಳವಡಿಸುವುದರೊಂದಿಗೆ ಮರಳು ತೆಗೆಯಲು ಕಾರ್ಮಿಕರನ್ನು ನೇಮಿಸಿಕೊಂಡಿದ್ದೇವೆ. ಮರಳು ತೆಗೆಯುವುದನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿರುವುದು ಪರವಾನಿಗೆದಾರರಿಗೆ ತೊಂದರೆಯಾಗಿದೆ. ಸಿಆರ್‌ಝಡ್‌ಗಳಲ್ಲಿ ಮರಳು ತೆಗೆಯುವುದನ್ನು ಸ್ಥಗಿತಗೊಳಿಸುವ ನಿರ್ದೇಶನವು 2,000 ರಿಂದ 3000 ಜನರ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ಎನ್‌ಜಿಟಿ ನಿರ್ದೇಶನಗಳಿಂದಾಗಿ ಈ ಜನರ ಜೀವನೋಪಾಯ ಅನಿಶ್ಚಿತತೆಯಲ್ಲಿದೆ” ಎಂದು ಮಯೂರ್ ಉಳ್ಳಾಲ್ ಹೇಳಿದ್ದಾರೆ.

ಸಿಆರ್‌ಝಡ್‌ನಲ್ಲಿ ಮರಳು ತೆಗೆಯಲು ಅನುಕೂಲವಾಗುವಂತೆ ಎನ್‌ಜಿಟಿ ನಿರ್ದೇಶನದ ವಿರುದ್ಧ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು ಎಂದು ಮಯೂರ್ ಉಳ್ಳಾಲ್ ಒತ್ತಾಯಿಸಿದ್ದಾರೆ. ಕರಾವಳಿ ಜಿಲ್ಲೆಗಳ ಚುನಾಯಿತ ಪ್ರತಿನಿಧಿಗಳು ಕೂಡ ಮರಳು ಪರವಾನಿಗೆದಾರರಿಗೆ ಸಹಾಯ ಮಾಡಲು ಬದ್ಧರಾಗಿರಬೇಕು ಎಂದಿದ್ದಾರೆ.