ನಾಯಿಗಳ ಮೇಲಿನ ಕ್ರೌರ್ಯ ಸಹಿಸುವುದಿಲ್ಲ: ಕರ್ನಾಟಕ ಹೈಕೋರ್ಟ್ ಸ್ಪಷ್ಟ ಸಂದೇಶ

ಬೆಂಗಳೂರು: ಪ್ರಾಣಿಗಳಿಗೂ ಹಿಂಸೆಯಿಲ್ಲದೆ ಬದುಕುವ ಹಕ್ಕಿದೆ ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್ Karnataka High Court, ಕ್ರೌರ್ಯ ಮತ್ತು ಲೈಂಗಿಕ ದುರ್ಬಳಕೆಯ ಆರೋಪ ಎದುರಿಸುತ್ತಿರುವ ವ್ಯಕ್ತಿಗೆ 9 ನಾಯಿಗಳ ಕಸ್ಟಡಿಯನ್ನು ಮರಳಿ ನೀಡಬಾರದು ಎಂದು ಆದೇಶಿಸಿದೆ. ನ್ಯಾಯಮೂರ್ತಿ ಎಂ ನಾಗಪ್ರಸನ್ನ M. Nagaprasanna ಅವರಿದ್ದ ಪೀಠ, ನಾಯಿಗಳನ್ನು ಮಾಲೀಕನಿಗೆ ಹಿಂತಿರುಗಿಸಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ಆದೇಶವನ್ನು “ಆಘಾತಕಾರಿ” ಎಂದು ಕಟುವಾಗಿ ಟೀಕಿಸಿದೆ.

ಬೆಂಗಳೂರಿನ ನಾಗಸಂದ್ರ ನಿವಾಸಿ ಕೆ.ಇ. ರಮೇಶ್ ಅವರ ಬಳಿ ವಿವಿಧ ತಳಿಯ 9 ನಾಯಿಗಳಿದ್ದು, ಅವುಗಳ ಮೇಲೆ ಪದೇಪದೆ ಹಲ್ಲೆ ಹಾಗೂ ಲೈಂಗಿಕ ದುರ್ಬಳಕೆ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ನೆರೆಹೊರೆಯವರು ವಿಡಿಯೋ ಸಾಕ್ಷ್ಯಗಳೊಂದಿಗೆ ದೂರು ನೀಡಿದ ಬಳಿಕ, People for the Ethical Treatment of Animals (ಪೆಟಾ) ಸಂಸ್ಥೆ ಕಾರ್ಯಾಚರಣೆ ನಡೆಸಿ ನಾಯಿಗಳನ್ನು ರಕ್ಷಿಸಿತ್ತು.

ಪ್ರಕರಣ ದಾಖಲಾದ ಬಳಿಕ ರಕ್ಷಿಸಲ್ಪಟ್ಟ ನಾಯಿಗಳನ್ನು ಮತ್ತೆ ಮಾಲೀಕನಿಗೆ ಒಪ್ಪಿಸಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅನುಮತಿ ನೀಡಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ ಪೆಟಾ ಹೈಕೋರ್ಟ್ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್, ವಿಡಿಯೋಗಳಲ್ಲಿ ನಾಯಿಗಳಿಗೆ ಕ್ರೂರವಾಗಿ ಹಲ್ಲೆ ನಡೆಸಿರುವ ದೃಶ್ಯಗಳು ಸ್ಪಷ್ಟವಾಗಿ ಕಂಡುಬರುತ್ತವೆ ಎಂದು ಹೇಳಿ, ಇಂತಹ ಗಂಭೀರ ಆರೋಪಗಳ ನಡುವೆಯೂ ಪ್ರಾಣಿಗಳನ್ನು ಮತ್ತೆ ಅದೇ ವ್ಯಕ್ತಿಯ ವಶಕ್ಕೆ ನೀಡಿರುವುದು ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟಿದೆ.

‘ಮಾತಾಡಲು ಸಾಧ್ಯವಿಲ್ಲದ ಜೀವಿಗಳಿಗೂ ನ್ಯಾಯ ದೊರಕಬೇಕು’

ತೀರ್ಪಿನ ವೇಳೆ ನ್ಯಾಯಾಲಯ, “ಪ್ರಾಣಿಗಳಿಗೆ ಮಾತಾಡಲು ಸಾಧ್ಯವಿಲ್ಲದಿದ್ದರೂ ಅವುಗಳು ನೋವು ಅನುಭವಿಸುತ್ತವೆ. ಅವುಗಳಿಗೂ ಹಿಂಸೆಯಿಂದ ರಕ್ಷಣೆ ಪಡೆಯುವ ಹಕ್ಕಿದೆ. ನ್ಯಾಯಾಲಯದ ಬಾಗಿಲು ತಟ್ಟಲು ಸಾಧ್ಯವಾಗದ ಜೀವಿಗಳಿಗೂ ನ್ಯಾಯ ದೊರಕಬೇಕು” ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಲ್ಲದೆ, ರಕ್ಷಿಸಲ್ಪಟ್ಟ ಎಲ್ಲಾ ನಾಯಿಗಳನ್ನು ಪ್ರಾಣಿದಯಾ ಸಂಘಟನೆಯ ವಶದಲ್ಲಿಯೇ ಮುಂದುವರಿಸಲು ಆದೇಶಿಸಿದೆ.

ಕೆ.ಇ. ರಮೇಶ್ ವಿರುದ್ಧ ನಾಯಿಗಳ ಮೇಲೆ ಹಲ್ಲೆ ಮತ್ತು ಲೈಂಗಿಕ ದುರ್ಬಳಕೆಯ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು, ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023ರ ಸೆಕ್ಷನ್ 325 ಮತ್ತು 62 ಸೇರಿದಂತೆ, Prevention of Cruelty to Animals Act, 1960 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಪ್ರಕರಣದ ತನಿಖೆ ಮುಂದುವರಿದಿರುವ ನಡುವೆಯೇ, ನಾಯಿಗಳ ಸುರಕ್ಷತೆ ಮತ್ತು ಕಲ್ಯಾಣವೇ ಪ್ರಮುಖವಾಗಿದ್ದು, ಅವುಗಳನ್ನು ಆರೋಪಿಯ ವಶಕ್ಕೆ ನೀಡಬಾರದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಪ್ರಾಣಿಗಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಈ ತೀರ್ಪು ಮಹತ್ವದ ಮೈಲಿಗಲ್ಲಾಗಿದ್ದು, ಪ್ರಾಣಿ ಕ್ರೌರ್ಯದ ವಿರುದ್ಧ ನ್ಯಾಯಾಂಗದ ಕಟ್ಟುನಿಟ್ಟಿನ ನಿಲುವನ್ನು ಮತ್ತೊಮ್ಮೆ ಒತ್ತಿ ಹೇಳಿದೆ.