ಭೂಗತ ಪಾತಕಿ ರವಿ ಪೂಜಾರಿಗಿತ್ತು ಮಲ್ಪೆಯ ನಂಟು, ರವಿ ಪೂಜಾರಿ ವಿರುದ್ಧ ಉಡುಪಿ ಸೇರಿದಂತೆ ಜಿಲ್ಲೆಯ ವಿವಿಧೆಡೆ 10 ಪ್ರಕರಣ ದಾಖಲು

ಉಡುಪಿ: ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ಬಂಧಿತನಾಗಿರುವ ಮೋಸ್ಟ್ ವಾಟೆಂಡ್ ಭೂಗತ ಪಾತಕಿ ರವಿ ಪೂಜಾರಿ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 10 ಪ್ರಕರಣಗಳು ದಾಖಲಾಗಿವೆ.
ರವಿ ಪೂಜಾರಿಯ ಮೇಲೆ ಹಫ್ತಾ ವಸೂಲಿ, ಬೆದರಿಕೆ ಸೇರಿದಂತೆ 10 ಪ್ರಕರಣಗಳು ದಾಖಲಾಗಿವೆ. 2006ರಲ್ಲಿ ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ಉದ್ಯಮಿಯೊಬ್ಬರಿಕೆ ಹಣಕ್ಕಾಗಿ ಬೆದರಿಕೆಯೊಡ್ಡಿದ ಪ್ರಕರಣ ದಾಖಲಾದರೆ, ಕಾರ್ಕಳ, ಉಡುಪಿ, ಬ್ರಹ್ಮಾವರ ಪೊಲೀಸ್ ಠಾಣೆಗಳಲ್ಲಿ ಹಫ್ತಾ ವಸೂಲಿ, ಬೆದರಿಕೆ ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಮಲ್ಪೆಯಲ್ಲಿತ್ತು ಪಾತಕಿಯ ಮನೆ!.
ಭಾರತ ದೇಶಕ್ಕೆ ಮೋಸ್ಟ್ ವಾಟೆಂಡ್ ಪಾತಕಿಯಾಗಿದ್ದ ರವಿ ಪೂಜಾರಿ ಮೂಲತಃ ಮಲ್ಪೆಯ ನಿವಾಸಿ. ಆತನ ಮನೆ ಮಲ್ಪೆಯ ವಡಾಭಾಂಡೇಶ್ವರದ ಸರಸ್ವತಿ ಭಜನಾ ಮಂದಿರ ಬಳಿ ಇತ್ತು ಎಂಬುವುದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಆದರೆ ಕೆಲ ವರ್ಷಗಳ ಹಿಂದೆಯೇ ಆ ಮನೆಯನ್ನು ಬೇರೆಯವರಿಗೆ ಮಾರಾಟ ಮಾಡಲಾಗಿದೆ.
ರವಿ ಪೂಜಾರಿಯ ತಂದೆ ಸೂರ್ಯ ಪೂಜಾರಿ ಮುಂಬೈಯ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಆದರೆ ಐದು ವರ್ಷಗಳ ಹಿಂದೆ ಅವರು ಮೃತಪಟ್ಟಿದ್ದಾರೆ. ಈತನ ತಾಯಿ ಸುಶೀಲ ಪೂಜಾರಿ. ಅವರು ಪ್ರಸ್ತುತ ಮಗಳೊಂದಿಗೆ (ರವಿ ಪೂಜಾರಿ ಸಹೋದರಿ) ದೆಹಲಿಯಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ. ಸಣ್ಣ ವಯಸ್ಸಿನಲ್ಲಿಯೇ ರವಿ ಪೂಜಾರಿ ಮುಂಬೈಗೆ ಹೋಗಿದ್ದ. ಹಾಗಾಗಿ ಉಡುಪಿಯಲ್ಲಿ ಇದ್ದುಕೊಂಡು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದ ಬಗ್ಗೆ ಯಾವುದೇ ಪ್ರಕರಣಗಳು ಆತನ ಮೇಲೆ ದಾಖಲಾಗಿಲ್ಲ ಎನ್ನುತ್ತೇವೆ ಪೊಲೀಸ್ ಮೂಲಗಳು.
1992 ರಲ್ಲಿ ಮಲ್ಪೆಗೆ ಬಂದಿದ್ದ ಪಾತಕಿ:
ಮುಂಬೈಯಲ್ಲಿ ನೆಲೆಸಿದ್ದ ರವಿ ಪೂಜಾರಿ ಕೊನೆಯದಾಗಿ 1992ರಲ್ಲಿ ಮಲ್ಪೆ ಭೇಟಿ ನೀಡಿದ್ದ ಎಂದು ಹೇಳಲಾಗುತ್ತಿದೆ. ಆತನ ತಂದೆ ಉದ್ಯೋಗದಿಂದ ನಿವೃತ್ತರಾದ ಬಳಿಕ ಕುಟುಂಬ ಸಮೇತರಾಗಿ ಸಂಬಂಧಿಕರ ಮದುವೆ ಪ್ರಯುಕ್ತ ಊರಿಗೆ ಬಂದಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ. ಆ ಬಳಿಕ ಆತ ಮಲ್ಪೆಗೆ ಭೇಟಿ ನೀಡಿಲ್ಲ. ನಂತರದ ದಿನಗಳಲ್ಲಿ ಭೂಗತ ಚಟುವಟಿಕೆಗಳಲ್ಲಿ ಸಕ್ರೀಯನಾಗಿದ್ದ ಆತ, ಮನೆಯವರಿಂದಲೂ ದೂರವಾಗಿದ್ದ ಎನ್ನಲಾಗಿದೆ. ಮುಂಬೈಯಲ್ಲಿ ಪಾತಕಿಯಾಗಿ ಕುಖ್ಯಾತಿಗಳಿಸಿದ ನಂತರ ಮುಂಬೈ ಸೇರಿದಂತೆ ಇತರ ಕಡೆಗಳಲ್ಲಿ ಆತನ ಆರ್ಭಟ ಹೆಚ್ಚಾಗಿತ್ತು. ಇದಕ್ಕೆ ಕಡಿವಾಣ ಹಾಕುವ ಉದ್ಧೇಶದಿಂದ ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದರು. ಇದನ್ನು ಮೊದಲೇ ಅರಿತ ಆತ ವಿದೇಶಕ್ಕೆ ಹಾರಿದ್ದ. ಆ ಬಳಿಕ ವಿದೇಶಗಳಲ್ಲಿ ತಲೆ ಮಾರಿಸಿಕೊಂಡು ತನ್ನ ಭೂಗತ ಚಟುವಟಿಕೆಗಳನ್ನು ಮುಂದುವರಿಸಿದ್ದ. ಇತ್ತೀಚೆಗೆ ಕೇಂದ್ರ ಸರ್ಕಾರ ಆತನ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. ಅದರಂತೆ ಸೆನೆಗಲ್ ದೇಶದಲ್ಲಿ ರವಿ ಪೂಜಾರಿಯ ಬಂಧನವಾಗಿದೆ ಎಂಬ ಮಾಹಿತಿ ಇದೀಗ ಹೊರಬಿದ್ದು, ಆತನನ್ನು ಭಾರತಕ್ಕೆ ಕರೆತರುವ ಎಲ್ಲ ಪ್ರಯತ್ನಗಳು ಕಾನೂನಿನ ಚೌಕಟ್ಟಿನಲ್ಲಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.