ಕುಂದಾಪುರ: ಅಕ್ಕನನ್ನೇ ಕೊಂದ ತಮ್ಮನಿಗೆ ಕೊನೆಗೂ ಸಿಕ್ತು ಶಿಕ್ಷೆ

ಕುಂದಾಪುರ: ಹಣ ಕೊಡಲು ಪೀಡಿಸಿದ ಸಹೋದರನು ಗಂಭೀರ ಹಲ್ಲೆ ನಡೆಸಿ ಸೋದರಿಯನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಮೇಲಿನ ಆರೋಪಣೆಗಳು ಸಾಭೀತಾಗಿದ್ದು ಆತ ದೋಷಿಯೆಂದು ತೀರ್ಮಾನಿಸಿ ಕುಂದಾಪುರದಲ್ಲಿನ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕಾಶ ಖಂಡೇರಿ ಶನಿವಾರ ತೀರ್ಪು ನೀಡಿದ್ದಾರೆ.

ಜುಲೈ 22ರಂದು ರಾತ್ರಿ ತಾಲೂಕಿನ ವಡೇರಹೊಬಳಿ ಗ್ರಾಮದ ಕುಂದೇಶ್ವರ ದೇವಸ್ಥಾನ ಹಿಂಭಾಗದ ನಿವಾಸಿ ವಿಜಯಾ ಭಂಡಾರಿ (50) ಎನ್ನುವರು ಆಕೆ ಸೋದರ ಅಣ್ಣಪ್ಪ ಭಂಡಾರಿ (45) ಎನ್ನುವಾತ ನಡೆಸಿದ ಗಂಭೀರ ಹಲ್ಲೆಯಿಂದ ಆಸ್ಪತ್ರೆಗೆ ದಾಖಲಾಗಿ ವಾರಗಳ ಬಳಿಕ (ಜು.೨೮) ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. 

ಅಂದು ನಡೆದಿದ್ದೇನು?
ಜುಲೈ 22ರಂದು ರಾತ್ರಿ ವಿಜಯಾ ಅವರು ಮನೆಯಲ್ಲಿದ್ದಾಗ ಅವರ ಸಹೋದರ ಅಣ್ಣಪ್ಪ ಭಂಡಾರಿ ಕುಡಿದು ಬಂದು ದುಡ್ಡಿನ ವಿಚಾರದಲ್ಲಿ ತಗಾದೆ ತೆಗೆಯುತ್ತಾನೆ. ಒಂದಷ್ಟು ಹೊತ್ತು ರಂಪಾಟ ಮಾಡಿದ ಅಣ್ಣಪ್ಪ ಸಿಟ್ಟಿನಲ್ಲಿ ವಿಜಯಾ ಅವರಿಗೆ ಕತ್ತಿಯಲ್ಲಿ ಮನಸ್ಸೋಇಚ್ಚೆ ಹಲ್ಲೆ ನಡೆಸುತ್ತಾನೆ. ಹಲ್ಲೆಯಿಂದ ಕುತ್ತಿಗೆ ಹಾಗೂ ಬೆನ್ನಿನ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು ರಕ್ತ ಮಡುವಿನಲ್ಲಿ ಬಿದ್ದ ಗಾಯಳುವನ್ನು ಸಂಬಂಧಿಗಳು ಆಸ್ಪತ್ರೆಗೆ ದಾಖಲಿಸುತ್ತಾರೆ. ವೈದ್ಯರು ಕುಂದಾಪುರ ಪೊಲೀಸರಿಗೆ ನೀಡಿದ ವರ್ತಮಾನದಂತೆ ಪೊಲೀಸರು ಆಸ್ಪತ್ರೆಗೆ ತೆರಳಿ ವಿಜಯಾ ಅವರ ಹೇಳಿಕೆ ಪಡೆದು ಅಣ್ಣಪ್ಪ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ಬಂಧಿಸುತ್ತಾರೆ. ಆದರೆ ಜೀವನ್ಮರಣ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಜಯಾ ಚಿಕಿತ್ಸೆ ಫಲಕಾರಿಯಾಗದೇ ಜು.28 ರ ಮುಂಜಾನೆ ಸಾವನ್ನಪ್ಪುತ್ತಾರೆ. ಸೋದರಿಯನ್ನು ಕೊಲೆ ಮಾಡಿದ ಆರೋಪ ಹೊತ್ತ ಅಣ್ಣಪ್ಪ ಭಂಡಾರಿ ಸಂಗಮ್ ಬಳಿ ಕ್ಷೌರದಂಗಡಿ ಹೊಂದಿದ್ದ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕುಂದಾಪುರ ಸಿಪಿಐ ಮಂಜಪ್ಪ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯವು  ಐಪಿಸಿ ಸೆಕ್ಷನ್ 448 (ಮನೆಗೆ ಅಕ್ರಮ ಪ್ರವೇಶ) ಅಡಿಯಲ್ಲಿ ಹಾಗೂ ಕೊಲೆ ಕೇಸು (ಐಪಿಸಿ ಸೆಕ್ಷನ್ 302) ಅಡಿಯಲ್ಲಿ ಆರೋಪಿ ದೋಷಿಯೆಂದು ತೀರ್ಪು ನೀಡಿದ್ದು ಅಪರಾಧಿಗೆ ಜೂ. ೨೮ ರಂದು ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ಆದೇಶಿಸಿದ್ದಾರೆ.

ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ವಾದ ಮಂಡಿಸಿದ್ದಾರೆ.