ಉತ್ಕರ್ಷ ಪವಾರ್ ಜೊತೆ ಸಪ್ತಪದಿ ತುಳಿದ ಕ್ರಿಕೆಟರ್​ ರುತುರಾಜ್​ ಗಾಯಕ್ವಾಡ್

ನವದೆಹಲಿ: ಇಂಗ್ಲೆಂಡ್​ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ ಸೆಣಸಾಟಕ್ಕೆ ಸಜ್ಜಾಗುತ್ತಿದ್ದರೆ, ಇತ್ತ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) ತಂಡದ ಸ್ಟಾರ್​ ಬ್ಯಾಟರ್​ ಆಗಿರುವ ರುತುರಾಜ್ ಗಾಯಕ್ವಾಡ್ ಅವರು ಗೆಳತಿ ಉತ್ಕರ್ಷ ಪವಾರ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಶನಿವಾರ ಕಾಲಿಟ್ಟರು.
ಮದುವೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಗಾಯಕ್ವಾಡ್​, “ಕ್ರಿಕೆಟ್ ಪಿಚ್‌ನಿಂದ ವಿಶೇಷ ವೇದಿಕೆಯವರೆಗೆ ನಮ್ಮ ಪ್ರಯಾಣ ಪ್ರಾರಂಭವಾಗಿದೆ!” ಎಂದು ಒಕ್ಕಣೆ ಬರೆದುಕೊಂಡಿದ್ದಾರೆ. ಇದಕ್ಕೆ ಕ್ರಿಕೆಟಿಗರು, ಗಣ್ಯರು ಶುಭಾಶಯ ಕೋರಿದ್ದಾರೆ.


ಮದುವೆ ಸಂಭ್ರಮದ ಕೆಲವು ಚಿತ್ರಗಳನ್ನು ಗಾಯಕ್ವಾಡ್​ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಜೂನ್ 7 ರಿಂದ ಜೂನ್ 11 ರವರೆಗೆ ಇಂಗ್ಲೆಂಡ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಆಸೀಸ್​ ಮತ್ತು ಭಾರತ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಐಪಿಎಲ್​ನಲ್ಲಿ ಮಿಂಚು ಹರಿಸಿದ್ದ ಸಿಎಸ್​ಕೆ ತಂಡದ ಬ್ಯಾಟರ್​ ರುತುರಾಜ್​ ಗಾಯಕ್ವಾಡ್​ ಮೀಸಲು ತಂಡದಲ್ಲಿ ಸ್ಥಾನ ಪಡೆದಿದ್ದರು. ಬಳಿಕ ವಿವಾಹ ಕಾರಣಕ್ಕಾಗಿ ತಂಡದಿಂದ ಹೊರಗುಳಿದಿದ್ದರು. ಶನಿವಾರ ಮದುವೆ ಕಾರ್ಯಕ್ರಮ ನಡೆದಿದೆ. ಟೀಂ ಇಂಡಿಯಾದ ಯುವ ಬ್ಯಾಟರ್ ತಮ್ಮ ಜೀವನದ ಮತ್ತೊಂದು ವಿಶೇಷ ಇನಿಂಗ್ಸ್​ ಆರಂಭಿಸಿದರು.
ಗಾಯಕ್ವಾಡ್​ ಸಂಗಾತಿಯೂ ಕ್ರಿಕೆಟರ್​: ಯುವ ಬ್ಯಾಟರ್​ ಕೈ ಹಿಡಿದಿರುವ ಉತ್ಕರ್ಷ ಪವಾರ್ ವೃತ್ತಿಪರ ಕ್ರಿಕೆಟ್ ಆಟಗಾರ್ತಿ. 24 ವರ್ಷದ ಉತ್ಕರ್ಷ ಪುಣೆ ನಿವಾಸಿಯಾಗಿದ್ದು, ಮಹಾರಾಷ್ಟ್ರ ಮಹಿಳಾ ಕ್ರಿಕೆಟ್ ತಂಡದಲ್ಲಿ ಆಡುತ್ತಿದ್ದಾರೆ. ಬಲಗೈ ಬ್ಯಾಟರ್​, ಬೌಲರ್ ಆಗಿರುವ ಇವರು 2021 ರಲ್ಲಿ ಲಿಸ್ಟ್ ಎ ಕ್ರಿಕೆಟ್ ಆಡಿದ್ದರು.ಗೆಳತಿ ಉತ್ಕರ್ಷ ಪವಾರ್​ಗೆ ಗಾಯಕ್ವಾಡ್ ಅಪ್ಪುಗೆ
ಸದ್ಯ ಪುಣೆಯ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಮತ್ತು ಫಿಟ್‌ನೆಸ್ ಸೈನ್ಸ್‌ ವ್ಯಾಸಂಗ ಮಾಡುತ್ತಿದ್ದಾರೆ. ಐಪಿಎಲ್ 2023 ರ ಫೈನಲ್ ಗೆಲುವಿನ ನಂತರ ರುತುರಾಜ್ ಮತ್ತು ಉತ್ಕರ್ಷ ಒಟ್ಟಿಗೆ ಕಾಣಿಸಿಕೊಂಡಿದ್ದರು. ಉತ್ಕರ್ಷ ಅವರು ಎಂ.ಎಸ್.​ ಧೋನಿ ಕಾಲಿಗೆ ಬಿದ್ದು ನಮಸ್ಕರಿಸಿದ್ದು ಭಾರಿ ಸುದ್ದಿಯಾಗಿತ್ತು.​

ಸಿಎಸ್​ಕೆ ಪರ ಮಿಂಚಿದ ಗಾಯಕ್ವಾಡ್​: 16 ನೇ ಸೀಸನ್​ ಚಾಂಪಿಯನ್​ ಆಗಿರುವ ಚೆನ್ನೈ ಸೂಪರ್​ ಕಿಂಗ್ಸ್​ ತಂಡ 5ನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯಿತು. ತಂಡದ ಆರಂಭಿಕ ಆಟಗಾರನಾಗಿದ್ದ ರುತುರಾಜ್ ಗಾಯಕ್ವಾಡ್​​ ಸೀಸನ್​ ಪೂರ್ತಿ ಅದ್ಭುತವಾಗಿ ಬ್ಯಾಟ್​ ಮಾಡಿದರು. ಸಿಎಸ್​ಕೆ ಪರವಾಗಿ ಆಡಿದ 16 ಪಂದ್ಯಗಳಲ್ಲಿ 42.14 ಸರಾಸರಿಯಲ್ಲಿ 590 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಅರ್ಧ ಶತಕಗಳಿವೆ. 92 ಗರಿಷ್ಠ ಸ್ಕೋರ್​ ಆಗಿದೆ. ಸಹ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಜೊತೆ ಪಾಲುದಾರಿಕೆಯಲ್ಲಿ ಅತಿಹೆಚ್ಚು ರನ್​ ಗಳಿಸಿದ ಜೋಡಿಯಾಗಿದೆ.

2019 ರಿಂದ ಐಪಿಎಲ್​ ಆಡುತ್ತಿರುವ ಗಾಯಕ್ವಾಡ್​, ಈವರೆಗೂ 1,797 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು 14 ಅರ್ಧಶತಕಗಳೂ ಇದರಲ್ಲಿವೆ. ಇನ್ನು ಭಾರತದ ಪರವಾಗಿ 9 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಒಂದು ಅರ್ಧಶತಕದೊಂದಿಗೆ 135 ರನ್ ಗಳಿಸಿದ್ದಾರೆ. ಅಲ್ಲದೇ, ಒಂದು ಏಕದಿನ ಪಂದ್ಯವನ್ನೂ ಆಡಿದ್ದು, 19 ರನ್ ಗಳಿಸಿದ್ದರು.
ಮದುವೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಗಾಯಕ್ವಾಡ್​