ವಿಮಾನದಲ್ಲಿ ನೀರಿನ ಬದಲು ಆಸಿಡ್ ಕುಡಿದ ಕರ್ನಾಟಕ ರಣಜಿ ತಂಡದ ನಾಯಕ ಮಯಾಂಕ್ ಅಗರ್ವಾಲ್: ಆಸ್ಪತ್ರೆಗೆ ದಾಖಲು; ತನಿಖೆ ಆರಂಭ

ಅಗರ್ತಲಾ: ಕರ್ನಾಟಕ ರಣಜಿ ತಂಡದ ನಾಯಕ ಮಯಾಂಕ್ ಅಗರ್ವಾಲ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಆಸಿಡ್ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ತಂಡವು ತ್ರಿಪುರಾದ ಅಗರ್ತಲಾದಿಂದ ಗುಜರಾತ್‌ನ ಸೂರತ್‌ಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಸೋಮವಾರ ನಡೆದ ರಣಜಿ ಪಂದ್ಯದಲ್ಲಿ ತ್ರಿಪುರಾ ವಿರುದ್ಧ ಕರ್ನಾಟಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದ ಮಯಾಂಕ್ ಅಗರ್ವಾಲ್ ವಿಮಾನದಲ್ಲಿ ನೀರು ಕುಡಿದು ತೀವ್ರ ಅಸ್ವಸ್ಥಗೊಂಡಿದ್ದರು. ತನಗೆ ಒದಗಿಸಲಾದ ನೀರನ್ನು ಸೇವಿಸಿದ ಸ್ವಲ್ಪ ಸಮಯದ ನಂತರ, ಅಗರ್ವಾಲ್ ಅವರ ನಾಲಿಗೆ, ಬಾಯಿ ಮತ್ತು ಕೆನ್ನೆಗಳಲ್ಲಿ ಸುಡುವ ಸಂವೇದನೆಯನ್ನು ಅನುಭವಿಸಿರುವುದನ್ನು ಪ್ರತ್ಯಕ್ಷದರ್ಶಿಗಳು ಬಹಿರಂಗಪಡಿಸಿದ್ದಾರೆ. ಮಾತನಾಡಲು ಹರಸಾಹಸ ಪಡುತ್ತಿದ್ದ ಅವರನ್ನು ತಂಡದ ಸದಸ್ಯರು ತಕ್ಷಣವೇ ಚಿಕಿತ್ಸೆಗೆ ಒಳಪಡಿಸಿದರು ಮತ್ತು ನಂತರ ಅವರನ್ನು ಅಗರ್ತಲಾದ ಐಎಲ್‌ಎಸ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಿದರು.

ಫೆಬ್ರವರಿ 2 ರಿಂದ ಸೂರತ್‌ನಲ್ಲಿ ರೈಲ್ವೇಸ್ ವಿರುದ್ಧ ಮುಂದಿನ ಪಂದ್ಯವನ್ನು ಆಡಲಿರುವ ಕರ್ನಾಟಕ ತಂಡವು ತಮ್ಮ ನಾಯಕನಿಲ್ಲದೆ ಸವಾಲನ್ನು ಎದುರಿಸುತ್ತಿದೆ. ತ್ರಿಪುರ ವಿರುದ್ಧದ ಯಶಸ್ವಿ ಮುಖಾಮುಖಿಯ ನಂತರ ತಂಡವು ಪಂದ್ಯಕ್ಕಾಗಿ ವಿಮಾನದ ಮೂಲಕ ಪ್ರಯಾಣಿಸಬೇಕಾಯಿತು. ಆತಂಕಕಾರಿ ಘಟನೆಯು ವಿಷಪ್ರಾಶನದ ಶಂಕೆಯನ್ನು ಹುಟ್ಟುಹಾಕಿದೆ. ಮಯಾಂಕ್ ಅಗರ್ವಾಲ್ ಅವರನ್ನು ಆಸ್ಪತ್ರೆಗೆ ವರ್ಗಾಯಿಸಲಾಗಿದ್ದು, ವಿಮಾನ ಸಿಬ್ಬಂದಿ ನೀರಿನ ಬಾಟಲಿಯನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಗಗನಸಖಿಯೊಬ್ಬರು ಮಯಾಂಕ್ ಗೆ ಕುಡಿಯುವ ನೀರಿನ ಬದಲು ಮತ್ತೊಂದು ಬಾಟಲಿಯನ್ನು ನೀಡಿದ್ದು ಬಾಟಲಿಯಲ್ಲಿ ಆಸಿಡ್ ಅಥವಾ ದೇಹಕ್ಕೆ ಹಾನಿಕಾರಕವಾದ ಕಠಿಣ ರಾಸಾಯನಿಕ ಅಂಶವಿತ್ತು ಎನ್ನಲಾಗಿದೆ. ಒಂದು ಗುಟುಕು ಕುಡಿದ ನಂತರ ಬಾಯಿಯ ಒಳಭಾಗ ಉರಿಯುತ್ತಿದ್ದಂತೆ ಮಯಾಂಕ್ ಅಗರ್ವಾಲ್ ಅದನ್ನು ಉಗುಳಿದ್ದಾರೆ. ವಿಮಾನದೊಳಗೆ ಅದು ಹೇಗೆ ಬಂತು, ಕುಡಿಯುವ ನೀರಿನ ಕಂಪಾರ್ಟ್‌ಮೆಂಟ್‌ಗೆ ಯಾರು ಹಾಕಿದರು ಮತ್ತು ಅದು ಯಾವ ರೀತಿಯ ಬಾಟಲಿ ಎಂದು ತಿಳಿಯದೆ ಮಯಾಂಕ್ ಅಗರ್ವಾಲ್‌ಗೆ ಹೇಗೆ ನೀಡಲಾಯಿತು ಎಂಬುದರ ಕುರಿತು ವಿಮಾನ ಸಿಬ್ಬಂದಿ ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.