ಇನ್ನಂಜೆ: ದೇವಾಡಿಗ ಸೇವಾ ಸಂಘ ಕಾಪು(ರಿ), ದೇವಾಡಿಗ ಯುವ ವೇದಿಕೆ ವತಿಯಿಂದ ದೇವಾಡಿಗ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್ ಅನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗಿಯಾಗಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಉಡುಪಿ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ, ಕೊಡವೂರು ನಗರಸಭಾ ಸದಸ್ಯ ವಿಜಯ್ ಕೊಡವೂರು, ಕ್ರೀಡೆಯ ಮೂಲಕ ಸಂಘಟನೆ ಸಾಧ್ಯ. ಇದರ ಉದ್ದೇಶ ಕೇವಲ ಕ್ರಿಕೆಟ್ ಅಲ್ಲ, ಬದಲಾಗಿ ಕ್ರಿಕೆಟ್ ಆಡುತ್ತಾ ನಾವೆಲ್ಲರೂ ಒಂದೇ ಎನ್ನುವ ಭಾವನೆಯಿಂದ ಸಂಘಟಿತರಾಗಬೇಕು. ಕೇವಲ ಆಟವನ್ನು ಮಾತ್ರವಲ್ಲ ನಮ್ಮ ಸಮಾಜದಲ್ಲಿ ಇರುವಂತಹ ಸಮಸ್ಯೆಗಳನ್ನು ನಾವು ಅರ್ಥಮಾಡಿಕೊಳ್ಳಬೇಕು. ಮತಾಂತರ, ಆರೋಗ್ಯಕ್ಕೆ ಸಂಬಂಧಪಟ್ಟಂತಹ ಸಮಸ್ಯೆ, ಸೂರಿನ ವ್ಯವಸ್ಥೆ, ವಿದ್ಯಾಭ್ಯಾಸದಲ್ಲಿ ವಂಚಿತರಾಗಿರಬಹುದು ಇಂತಹ ಸಮಸ್ಯೆಯನ್ನು ನಾವು ಜೊತೆಯಾಗಿ ಬಗೆಹರಿಸಿದಾಗ ಮಾತ್ರ ಆಯೋಜಕರ ಯೋಚನೆ ಯಶಸ್ವಿಯಾಗಲು ಸಾಧ್ಯ ಎಂದರು.
ಮತಾಂತರ ಎನ್ನುವುದು ಪಿಡುಗಾಗಿದ್ದು, ಪರಿವಾರದಲ್ಲಿ ಎಲ್ಲರೂ ಚಿಂತನೆ ಮಾಡಿ ಮತಾಂತರವಾಗದಂತೆ ತಡೆಯಬೇಕು. ಇದನ್ನು ಮಾಡಿದಾಗ ಮಾತ್ರ ಹಿಂದುತ್ವ ಉಳಿಬಹುದು, ಹಿಂದುತ್ವ ಉಳಿದರೆ ನಮ್ಮ ನಮ್ಮ ಸಮಾಜ ಉಳಿಯುತ್ತದೆ. ಧರ್ಮ ಉಳಿದರೆ ಖಂಡಿತವಾಗಿಯೂ ಬೇರೆಲ್ಲಾ ಸಮಾಜಗಳು ಉಳಿಯುತ್ತವೆ. ಈ ನಿಟ್ಟಿನಲ್ಲಿ ಸಂಘಟಕರು ಕ್ರಿಕೆಟ್ ಆಟವನ್ನು ಆಯೋಜಿಸಿದ್ದು, ಈ ದೇಶ ರಕ್ಷಣೆ ಮಾಡುವ ಯುವಕರು ಕ್ರೀಡೆಯ ಮೂಲಕವೂ ಧರ್ಮ ರಕ್ಷಣೆ ಕಾರ್ಯ ನಡೆಸಲಿ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.












