ವಿರಾಟ್ ಕೊಹ್ಲಿ ಅಭಿಮಾನಿಯ ಕ್ರಿಕೆಟ್ ಕೌಶಲ್ಯ ವೈರಲ್: ಯುವ ಆಟಗಾರ್ತಿ ಮಕ್ಸೂಮಾಗೆ ಲಡಾಖ್ ಆಡಳಿತದ ಬೆಂಬಲ

ಲಡಾಖ್: ಇತ್ತೀಚೆಗೆ ಕಾರ್ಗಿಲ್‌ನ ಕಕ್ಸರ್ ಹೈಸ್ಕೂಲ್‌ನ 6 ನೇ ತರಗತಿಯ ವಿದ್ಯಾರ್ಥಿನಿ ಮಕ್ಸೂಮಾ ಎನ್ನುವ ವಿದ್ಯಾರ್ಥಿನಿಯು ಕ್ರಿಕೆಟ್ ಆಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ. ಲಡಾಖ್ ಆಡಳಿತವು ಕಾರ್ಗಿಲ್‌ನ ಕಕ್ಸರ್‌ನ ಯುವ ಕ್ರಿಕೆಟ್ ಆಟಗಾರ್ತಿ ಮಕ್ಸೂಮಾ ಅವರ ಕ್ರಿಕೆಟ್ ಪ್ರತಿಭೆ ಮತ್ತು ಅವರ ಆಕಾಂಕ್ಷೆಗಳಿಗೆ ಬೆಂಬಲವನ್ನು ನೀಡಿದೆ.

ಈ ವೀಡಿಯೊದಲ್ಲಿ ಆಕೆ ಕ್ರಿಕೆಟ್‌ನ ಮೇಲಿನ ತನ್ನ ಉತ್ಸಾಹದ ಬಗ್ಗೆ ಮಾತನಾಡುತ್ತಾಳೆ. ತನ್ನ ಮನೆಯಲ್ಲಿ ತನ್ನ ತಂದೆಯಿಂದ ಮತ್ತು ಶಾಲೆಯಲ್ಲಿ ಶಿಕ್ಷಕರಿಂದ ಪಡೆದ ಬೆಂಬಲ ಮತ್ತು ತರಬೇತಿಯ ಬಗ್ಗೆ ಹೇಳಿಕೊಂಡಿದ್ದಾಳೆ. ಮಕ್ಸೂಮಾ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯಂತೆ ಕ್ರಿಕೆಟಿಗಳಾಗಲು ಬಯಸುತ್ತಾಳೆ. ಆಕೆಯ ಕ್ರಿಕೆಟ್ ಕೌಶಲ್ಯ ಮತ್ತು ಆತ್ಮವಿಶ್ವಾಸವನ್ನು ಮೆಚ್ಚಿದ ವಿಶ್ವದಾದ್ಯಂತದ ಹಲವಾರು ಅಂತರರಾಷ್ಟ್ರೀಯ ಕ್ರಿಕೆಟಿಗರು ಸೇರಿದಂತೆ ಅನೇಕ ಜನರ ಗಮನವನ್ನು ಈ ವೀಡಿಯೊ ಸೆಳೆದಿದೆ.

ಆಕೆಯ ವಿಡಿಯೋ ಲಡಾಖ್ ಕೇಂದ್ರಾಡಳಿತ ಪ್ರದೇಶದ ಯುವಜನ ಸೇವೆಗಳು ಮತ್ತು ಕ್ರೀಡಾ ಇಲಾಖೆಯ ಗಮನಕ್ಕೆ ಬಂದಿದ್ದರಿಂದ, ಇಲಾಖೆಯು ಯುವ ಕ್ರಿಕೆಟಿಗಳಿಗೆ ಮಾತ್ರವಲ್ಲದೆ ಆಕೆಯ ತಂಡ ಮತ್ತು ಶಾಲೆಗೂ ಬೆಂಬಲ ನೀಡಲು ನಿರ್ಧರಿಸಿದೆ.

ಯುವಜನ ಮತ್ತು ಕ್ರೀಡಾ ಸೇವೆಗಳು ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿ ರವೀಂದರ್ ಕುಮಾರ್ ಅವರು ಕಕ್ಸರ್ ಪ್ರೌಢಶಾಲೆಗೆ ಸಂಪೂರ್ಣ ಕ್ರಿಕೆಟ್ ಸೆಟ್ ಅನ್ನು ತಕ್ಷಣವೇ ಕಳುಹಿಸಲಾಗುವುದು ಎಂದು ಘೋಷಿಸಿದ್ದಾರೆ.

ಕ್ರಿಕೆಟ್ ಒಂದು ಸಾಂಘಿಕ ಕ್ರೀಡೆಯಾಗಿದೆ ಮತ್ತು ನಾವು ಮಕ್ಸೂಮಾ ಮತ್ತು ಇಂತಹ ಇತರ ವಿದ್ಯಾರ್ಥಿಗಳನ್ನು ಅವರ ವೈಯಕ್ತಿಕ ಕೌಶಲ್ಯ ಮತ್ತು ತಂಡದಲ್ಲಿ ಆಡುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಪೋಷಿಸಬೇಕು. ಹೆಚ್ಚುವರಿ ಬೆಂಬಲ ಮತ್ತು ತರಬೇತಿಗಾಗಿ ವಿವಿಧ ಕ್ರೀಡೆಗಳಲ್ಲಿ ಅಂತಹ ಪ್ರತಿಭೆಗಳನ್ನು ಗುರುತಿಸುವುದರ ಜೊತೆಗೆ ಲಡಾಖ್‌ನ ಪರ್ವತ ಪ್ರದೇಶದಲ್ಲಿ ಕ್ರೀಡಾ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.