ಕ್ರಿಕೆಟ್‌ ಬೆಟ್ಟಿಂಗ್‌ ಆರೋಪಿ ಭರತ್‌ ಜಯರಾಮ್‌ ದಾಸಗೆ ಗಡಿಪಾರು


ಉಡುಪಿ: ಕ್ರಿಕೆಟ್‌ ಬೆಟ್ಟಿಂಗ್‌ ಪ್ರಕರಣಗಳಲ್ಲಿ ಆರೋಪಿಯಾಗಿರುವ ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮದ ಮೂಡುಬಿರ್ತಿ ನಿವಾಸಿ ಭರತ್‌ ಜಯರಾಮ್‌ ದಾಸ (34) ವಿರುದ್ಧ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ವಿಶೇಷ ಕಾರ್ಯಾಂಗ ದಂಡಾಧಿಕಾರಿಗಳು ಗಡಿಪಾರು ಆದೇಶ ಹೊರಡಿಸಿದ್ದಾರೆ.
ಭರತ್‌ ಜಯರಾಮ್‌ ದಾಸ ವಿರುದ್ಧ ಕೋಟ ಹಾಗೂ ಕುಂದಾಪುರ ಪೊಲೀಸ್ ಠಾಣೆಗಳಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಒಂದು ಪ್ರಕರಣದಲ್ಲಿ ಶಿಕ್ಷೆಯಾಗಿದ್ದು, ಉಳಿದ ಎರಡು ಪ್ರಕರಣಗಳು ತನಿಖೆಯ ಹಂತದಲ್ಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮೇ 14ರಂದು ಗಡಿಪಾರು ಆದೇಶ ಜಾರಿಗೊಳಿಸಲಾಗಿದೆ. ಅದರಂತೆ ಆರೋಪಿಯನ್ನು ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.