ಉಡುಪಿ – ಕಲ್ಯಾಣಪುರದಲ್ಲಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ‘ಕ್ರಿಯೇಟಿವ್ ಸಮಾಗಮ’ ಎಂಬ ಶೀರ್ಷಿಕೆಯಡಿ ದಿನಾಂಕ 15-07-2026 ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕ್ರಿಯೇಟಿವ್ ಸಂಸ್ಥೆ ಬರಿ ವಿದ್ಯೆ ಕಲಿಸುವುದು ಅಷ್ಟೇ ಅಲ್ಲ ವಿದ್ಯಾರ್ಥಿಗಳಲ್ಲಿ ಹಲವು ಬಗೆಯ ಸಂಸ್ಕಾರವನ್ನು ಕಲಿಸುತ್ತದೆ ಎಂದು ಕ್ರಿಯೇಟಿವ್ ಸಹ ಸಂಸ್ಥಾಪಕರಾದ ಗಣಪತಿ ಭಟ್ ಹೇಳಿದರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ ಓದಿ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಪರಿಚಯಿಸುವುದರೊಂದಿಗೆ ಸಂಸ್ಥಾಪಕರಾದ ಅಶ್ವಥ್ ಎಸ್.ಎಲ್ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಗಣನಾಥ ಶೆಟ್ಟಿ ಅವರು ನಾವು ಮಾಡುವ ಸಣ್ಣ ಸಣ್ಣ ಪ್ರಯತ್ನಗಳು ಮುಂದೆ ಭವಿಷ್ಯದಲ್ಲಿ ಉತ್ತಮ ಫಲಿತಾಂಶ ನೀಡುತ್ತವೆ, ವಿದ್ಯಾರ್ಥಿಗಳು ಸತತ ಪ್ರಯತ್ನ, ನಿರಂತರ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ಯಶಸ್ಸು ಸಾಧ್ಯ ಎಂದು ತಿಳಿಹೇಳಿದರು.
ತ್ರಿಶಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣ ಹೆಗಡೆ ಪ್ರಸ್ತಾವಿಕ ನುಡಿಗಳನ್ನಾಡಿದರು.ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲರಾದ ಜೋಯಲ್ ಮನೋಜ್ ಫರ್ನಾಂಡಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು, ವಿದ್ಯಾರ್ಥಿನಿ ಅನು ಕೆ.ಆರ್ ಸರ್ವರನ್ನು ಸ್ವಾಗತಿಸಿದರು, ಸೋನಲ್ ಕ್ವಾಡ್ರಸ್ ವಂದಿಸಿದರು.ವಿದ್ಯಾರ್ಥಿನಿ ಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಬೋಧಕ – ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.















