ಉಡುಪಿ: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನ್ಯೂ ಫ್ರೆಂಡ್ಸ್ ಕಪ್ಪೆಟ್ಟು ತಂಡದ ವತಿಯಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಕಲಾಕೃತಿ ಹಾಗೂ ಪುರಾತನ ಸಂಸತ್ ಭವನದ ಸುಂದರ ಮಾದರಿಯನ್ನು ಕಪ್ಪೆಟ್ಟುವಿನಲ್ಲಿ ನಿರ್ಮಿಸಲಾಗಿದೆ.
ಸ್ವಾತಂತ್ರ್ಯೋತ್ಸವವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ತಂಡದ ಸದಸ್ಯರು ಒಗ್ಗೂಡಿ ಕಲಾಕೃತಿಯನ್ನು ನಿರ್ಮಿಸಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಸಂವಿಧಾನ ರಚನೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಅಮೂಲ್ಯ ಕೊಡುಗೆಯನ್ನು ಸ್ಮರಿಸುವುದರ ಜತೆಗೆ, ಪ್ರಜಾಪ್ರಭುತ್ವದ ಪ್ರತೀಕವಾಗಿರುವ ಸಂಸತ್ ಭವನದ ಮಹತ್ವವನ್ನು ಸಾರುವ ರೀತಿಯಲ್ಲಿ ಮಾದರಿಯನ್ನು ಸಿದ್ಧಪಡಿಸಲಾಗಿದೆ.

ತಂಡದ ಸದಸ್ಯರಾದ ಸುಧಾಕರ್, ದಯಾನಂದ, ಹರೀಶ್, ಬಾಲು, ಪ್ರಮೋದ್, ಪ್ರಸಾದ್, ಸುರೇಶ್, ಶಶಾಂಕ್, ಕುಮಾರ್, ಸಂಪ್ರೀತ್, ನಿಹಾಲ್ ಹಾಗೂ ಸೃಜನ್ ಅವರು ಒಗ್ಗಟ್ಟಿನಿಂದ ಶ್ರಮಿಸಿ ಕಲಾಕೃತಿಯನ್ನು ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ.
ದೇಶಭಕ್ತಿ, ಸಂವಿಧಾನದ ಮೌಲ್ಯಗಳು ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಯುವಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ತಂಡದ ಈ ಪ್ರಯತ್ನ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಕಲಾಕೃತಿಯು ಸ್ಥಳೀಯರಲ್ಲಿ ದೇಶಾಭಿಮಾನ ಹಾಗೂ ಸಂವಿಧಾನದ ಬಗ್ಗೆ ಗೌರವ ಮೂಡಿಸುವಂತಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.















