ಉಡುಪಿ: ಹೆಣ್ಣು ಮಕ್ಕಳ ಬೆಳವಣಿಗೆಗೆ ಸುರಕ್ಷಿತ ವಾತಾವರಣ ನಿರ್ಮಿಸುವುದರ ಮೂಲಕ ಸಮಾಜದಲ್ಲಿನ ಲಿಂಗ ತಾರತಮ್ಯ ಸಮಸ್ಯೆಯನ್ನು ಸರಿಪಡಿಸಲು ಸಾಧ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಸೋಮವಾರ, ಉಡುಪಿಯ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಚೈಲ್ಡ್ಲೈನ್ 1098 ಉಡುಪಿ ಮತ್ತು ಶ್ರೀಕೃಷ್ಣ ರೋರ್ಯಾಕ್ಟ್ ಕ್ಲಬ್ ಇವರ ಜಂಟಿ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತೀ ಹೆಣ್ಣು ಕೂಡಾ ಸಾಧಕಿ. ಪ್ರಸ್ತುತ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರದಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಆರೋಗ್ಯ, ಪೋಷಣೆ, ಶಿಕ್ಷಣದಲ್ಲಿ ಹೆಣ್ಣುಮಕ್ಕಳಿಗೆ ಸಮಾನ ಅವಕಾಶ ನೀಡಬೇಕು ಹಾಗೂ ಅವರ ಸುರಕ್ಷತೆ ಬಗ್ಗೆ ಸಮಾಜದಲ್ಲಿ ಗರಿಷ್ಠ ಜಾಗೃತಿ ಮೂಡಿಸಬೇಕು. ಹೆಣ್ಣು ಮಕ್ಕಳು ತಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಬೇಕು. ಮಹಿಳಾ ಸಾಧಕಿಯರ ಬಗ್ಗೆ ತಿಳಿದು ಅವರಿಂದ ಪ್ರೇರೇಪಣೆ ಪಡೆಯಬೇಕು. ಕಾನೂನಿನಲ್ಲಿ ತಮಗೆ ನೀಡಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶರ್ಮಿಳಾ ಹೇಳಿದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್ ಮಾತನಾಡಿ, ಹೆಣ್ಣು ಮಕ್ಕಳು ತಮ್ಮ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿಮಗಾಗಿಯೇ ರೂಪಿಸಿರುವ ಹಲವು ಯೋಜನೆಗಳ ಬಗ್ಗೆ ಅರಿತು ಅವುಗಳ ಪ್ರಯೋಜನ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ವಿತರಿಸಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಶೋಭಾ ಶೆಟ್ಟಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಹೇಶ್, ಉಡುಪಿ ಸರಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಜಯಲಕ್ಷ್ಮಿ ಉಪಸ್ಥಿತರಿದ್ದರು.
ಮಕ್ಕಳ ಸಹಾಯವಾಣಿ 1098 ನ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಲಾಯಿತು. ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಉಪನ್ಯಾಸ ನೀಡಿದರು. ಉಡುಪಿ ಚೈಲ್ಡ್ಲೈನ್ 1098 ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿದರು, ಜ್ಯೋತಿ ನಿರೂಪಿಸಿದರು, ರೋರ್ಯಾಕ್ಟ್ ಕ್ಲಬ್ನ ಕಾರ್ಯದರ್ಶಿ ತನ್ವಿ ವಿಶಿಷ್ಠ ವಂದಿಸಿದರು.