ಕುಂದಾಪುರ ಅರಾಟೆ ಸೇತುವೆಯಲ್ಲಿ ಬಿರುಕು; ಜನರಲ್ಲಿ ಮನೆಮಾಡಿದ ಆತಂಕ

ಉಡುಪಿ: ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬರುವ ಅರಾಟೆ ಸೇತುವೆಯಲ್ಲಿ ದೊಡ್ಡದಾದ ಬಿರುಕು ಕಾಣಿಸಿಕೊಂಡಿದ್ದು, ಜನರಲ್ಲಿ ಭೀತಿ ಹುಟ್ಟಿಸಿದೆ.

ಚತುಷ್ಪತ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಅರಾಟೆ ಸೇತುವೆಯ ಪಕ್ಕದಲ್ಲೆ ಹೊಸ ಸೇತುವೆ ನಿರ್ಮಿಸಲಾಗಿತ್ತು. ಕಳೆದ ಎರಡು ವರ್ಷಗಳಿಂದ ಈ ಸೇತುವೆ ವಾಹನಗಳ ಸಂಚಾರಕ್ಕೆ ಮುಕ್ತವಾಗಿದ್ದು, ಈಗ ಏಕಾಏಕಿಯಾಗಿ ಬಿರುಕು ಕಾಣಿಸಿಕೊಂಡಿದೆ. ಇದು ವಾಹನ ಸವಾರರ ಆತಂಕಕ್ಕೆ ಕಾರಣವಾಗಿದೆ.

ಸದ್ಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳನ್ನು ಹಳೆ ಸೇತುವೆಯ ಮೂಲಕ ಬಿಡಲಾಗುತ್ತಿದೆ.

ಈ ಹಿಂದೆಯೂ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಬಳಿಕ ಗುತ್ತಿಗೆ ಪಡೆದ ಕಂಪೆನಿ ಅದನ್ನು ದುರಸ್ತಿ ಪಡಿಸಿತ್ತು. ಇದೀಗ ಇನ್ನೊಂದು ಭಾಗದಲ್ಲಿ ಬಿರುಕು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಸೇತುವೆ ಕಳಪೆ ಕಾಮಗಾರಿಯ ಬಗ್ಗೆ ತನಿಖೆ‌ ನಡೆಸಿ ಗುತ್ತಿಗೆ ಕಂಪೆನಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.