ಲಾಕ್ ಡೌನ್ ನಿಯಾಮವಳಿಯಲ್ಲಿ ಸ್ವಲ್ಪ ಸಡಿಲಿಕೆ: ಕೋವಿಡ್ ಹಾಟ್‌ಸ್ಪಾಟ್ ಅಲ್ಲದ ಪ್ರದೇಶಗಳಲ್ಲಿ ನಾಳೆಯಿಂದ ಆಯ್ದ ಸೇವೆಗಳಿಗೆ ಅನುಮತಿ

ಬೆಂಗಳೂರು: ಕೊರೊನಾ (ಕೋವಿಡ್–19) ಕಂಟೈನ್ಮೆಂಟ್ ಅಲ್ಲದ ವಲಯಗಳಲ್ಲಿ ನಾಳೆಯಿಂದ ಕೊರಿಯರ್, ನಿರ್ಮಾಣ ಕಾರ್ಯ, ಪ್ಯಾಕೇಜಿಂಗ್ ವಸ್ತುಗಳ ತಯಾರಿಕೆ ಸೇರಿದಂತೆ ಆಯ್ದ ಕೆಲವು ಸೇವೆಗಳಿಗೆ ರಾಜ್ಯ  ಸರ್ಕಾರ ಅವಕಾಶ ನೀಡಿದೆ.
ಲಾಕ್ ಡೌನ್ ನಿಂದ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಆಯ್ದ ಕೆಲ ಹೆಚ್ಚುವರಿ ಚಟುವಟಿಕೆಗಳಿಗೆ ಏ. 23ರಿಂದ ಅವಕಾಶ ನೀಡಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ತಿಳಿಸಿದ್ದಾರೆ.
ಸರ್ಕಾರ ಕೋವಿಡ್ ಹಾಟ್ ಸ್ಪಾಟ್ ಗಳೆಂದು ಗುರುತಿಸಿರುವ ಪ್ರದೇಶಗಳಿಗೆ ಈ ನಿಯಮ ಅನ್ವಯವಾಗಲ್ಲ. ಅಲ್ಲಿ ಸಾರ್ವಜನಿಕ ಸಾರಿಗೆ ಮೇಲಿನ ನಿರ್ಬಂಧ ಮೇ 3ರ ವರೆಗೆ ಮುಂದುವರಿಯಲಿದ್ದು, ತುರ್ತು ಸೇವೆಗಳ ಪಾಸ್ ಹೊಂದಿರುವ ಖಾಸಗಿ ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶವಿದೆ. ಕೆಲಸದ ಸ್ಥಳಗಳಿಗೆ ಮತ್ತು ಅಲ್ಲಿಂದ ವಾಪಸಾಗಲು ಪಾಸ್‌ಗಳೊಂದಿಗೆ ಪ್ರಯಾಣಿಸುವ ಸಿಬ್ಬಂದಿಗೆ ಮಾತ್ರ ಅವಕಾಶವಿದೆ.
ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ, ನೀರಾವರಿ ಯೋಜನೆಗಳು, ಕಟ್ಟಡ ನಿರ್ಮಾಣ ಮತ್ತು ಕೈಗಾರಿಕೆ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಆದರೆ ಸ್ಥಳದಲ್ಲಿರುವ ಕಾರ್ಮಿಕರನ್ನೇ ಬಳಸಿಕೊಂಡು ಚಟುವಟಿಕೆ ನಡೆಸಬೇಕು, ಬೇರೆಡೆಯಿಂದ ಕರೆಸಿಕೊಳ್ಳುವಂತಿಲ್ಲ ಎಂದು ಸೂಚಿಸಲಾಗಿದೆ.
ಸ್ವ ಉದ್ಯೋಗಿಗಳಾದ ಎಲೆಕ್ಟ್ರಿಷಿಯನ್‌, ಐಟಿ ದುರಸ್ತಿ, ಪ್ಲಂಬರ್‌, ಮೆಕ್ಯಾನಿಕ್‌, ಬಡಗಿಗಳಿಗೆ ಕೆಲಸ ಮಾಡಲು ಅನುಮತಿ ನೀಡಲಾಗಿದೆ.
ಔಷಧ, ವೈದ್ಯಕೀಯ ಸೇವೆ, ವೈದ್ಯಕೀಯ ಉಪಕರಣ ಮತ್ತು ಅವುಗಳ ಕಚ್ಚಾ ಸಾಮಗ್ರಿ, ಗ್ರಾಮೀಣ ಪ್ರದೇಶಗಳ ಕೈಗಾರಿಕೆಗಳಲ್ಲಿ ಆಹಾರ ಸಂಸ್ಕರಣೆ, ಪ್ಯಾಕೇಜಿಂಗ್ ವಸ್ತುಗಳ ತಯಾರಿಕೆಗೆ ಅನುಮತಿ ನೀಡಲಾಗಿದೆ.
ವಿಮಾನ, ಬಸ್, ಮೆಟ್ರೊ ರೈಲು, ಅಂತರ ಜಿಲ್ಲೆ, ಅಂತರರಾಜ್ಯ ಪ್ರಯಾಣ ನಿಷೇಧ ಮೇ 3ರ ವರೆಗೂ ಮುಂದುವರಿಯಲಿದೆ. ಶಾಪಿಂಗ್‌ ಮಾಲ್‌ಗಳು, ಚಿತ್ರ ಮಂದಿರಗಳು, ಬಾರ್‌ಗಳೂ ಬಂದ್ ಇರಲಿವೆ. ಧಾರ್ಮಿಕ ಕೇಂದ್ರಗಳೂ ಮೇ 3ರ ವರೆಗೆ ತೆರಯುವಂತಿಲ್ಲ.