ಉಡುಪಿ: ಮಹಾರಾಷ್ಟ್ರದಿಂದ ಬರುವವರಿಗೆ ಇನ್ಮುಂದೆ ಸರ್ಕಾರಿ ಕ್ವಾರಂಟೈನ್ ಇರುವುದಿಲ್ಲ. ಅದರ ಬದಲಾಗಿ ಅವರನ್ನು 14 ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ಮಾಡಲಾಗುವುದು. ಹಾಗೆಯೇ ಅವರು ಉಳಿದುಕೊಳ್ಳುವ ಮನೆಯನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದರು. ಹೊರರಾಜ್ಯದಿಂದ ಬರುವ ವ್ಯಕ್ತಿಗಳಿಗೆ ಸಂಬಂಧಿಸಿ ರಾಜ್ಯದಲ್ಲಿ ನಿನ್ನೆ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಅದರಂತೆ ಸೀಲ್ ಹಾಕಿಸಿಕೊಂಡು ಹೋಮ್ ಕ್ವಾರಂಟೈನ್ ಆಗುವ ವ್ಯಕ್ತಿ ಮನೆಯಲ್ಲಿಯೇ ಇರಬೇಕು. ಒಂದು ವೇಳೆ ಆತ ಹೊರಬಂದು ಓಡಾಡಿದರೆ ಆತನ ಮೇಲೆ ಕೇಸ್ ದಾಖಲಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಅಪಾರ್ಟ್ ಮೆಂಟ್ ಗಳಲ್ಲಿ ಯಾವುದೇ ಒಬ್ಬ ವ್ಯಕ್ತಿ ಕ್ವಾರಂಟೈನ್ ಆಗಿದ್ದಾರೆ. ಆ ಅಪಾರ್ಟ್ ಮೆಂಟ್ ಅನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡುವುದಿಲ್ಲ. ಬದಲಾಗಿ ಕೇವಲ ವ್ಯಕ್ತಿ ಇರುವ ಮನೆಯನ್ನು ಮಾತ್ರ ಸೀಲ್ ಡೌನ್ ಮಾಡಲಾಗುತ್ತದೆ. ಜಿಲ್ಲಾಧಿಕಾರಿಗೆ ಜಿಲ್ಲೆಯ ಸಂಪೂರ್ಣ ಅಧಿಕಾರ ನೀಡಲಾಗಿದೆ. ಸೀಲ್ ಡೌನ್ ಆಗಿರುವ ಮನೆಯ ಮೇಲೆ ನಿಗಾ ವಹಿಸಲು ಪೊಲೀಸ್, ಆಶಾ ಕಾರ್ಯಕರ್ತೆಯರನ್ನು ನೇಮಿಸಲಾಗುವುದು ಎಂದು ಮಾಹಿತಿ ನೀಡಿದರು.