ಉಡುಪಿ: ಕೋವಿಡ್ ಪಾಸಿಟಿವಿಟಿ ದರ ಶೇ. 2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ನಾಳೆ (ಆ.23) ಯಿಂದ 9ನೇ ತರಗತಿಯಿಂದ ಪಿಯುಸಿವರೆಗಿನ ತರಗತಿಗಳು ಆರಂಭವಾಗುತ್ತಿದೆ. ಆದರೆ, ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ. 2ಕ್ಕಿಂತ ಹೆಚ್ಚಿರುವುದರಿಂದ ಸದ್ಯ ಜಿಲ್ಲೆಯಲ್ಲಿ ಶಾಲಾ ಕಾಲೇಜು ಆರಂಭವಾಗುವುದಿಲ್ಲ.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲೆಯಲ್ಲಿ ನಾಳೆಯಿಂದ ಶಾಲಾ ಕಾಲೇಜುಗಳನ್ನು ಆರಂಭವಾಗುವುದಿಲ್ಲ. ಜಿಲ್ಲೆಯಲ್ಲಿ ಸದ್ಯ ಕೋವಿಡ್ ಪಾಸಿಟಿವಿಟಿ ದರ ಶೇ. 2.5ರಷ್ಟಿದ್ದು, ಅದು ಶೇ.2ಕ್ಕಿಂತ ಕೆಳಗಿಳಿದ ಬಳಿಕವೇ ಶಾಲೆಗಳನ್ನು ತೆರೆಯುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ಐದು ಜಿಲ್ಲೆಗಳಲ್ಲಿ ಶಾಲೆ ಆರಂಭ ಇಲ್ಲ:
ಉಡುಪಿ ಸಹಿತ ರಾಜ್ಯದ ಐದು ಜಿಲ್ಲೆಗಳಲ್ಲಿ ನಿತ್ಯ ಕೋವಿಡ್ ಪಾಸಿಟಿವಿಟಿ ರೇಟ್ ಏರಿಕೆ ಕಾಣುತ್ತಿದೆ. ಉಡುಪಿ, ಹಾಸನ, ದಕ್ಷಿಣ ಕನ್ನಡ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಪಾಸಿಟಿವಿಟಿ ದರದಲ್ಲಿ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಈ ಜಿಲ್ಲೆಗಳಲ್ಲಿ ಶಾಲಾ ಕಾಲೇಜು ತೆರೆಯುವುದಿಲ್ಲ. ಈ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಶಾಲೆಗಳು ಆರಂಭವಾಗಲಿದೆ.

















