ಕೋವಿಡ್-19 ಮಾಹಿತಿಗಾಗಿ ವೆಬ್‍ಸೈಟ್ ಹಾಗೂ ಕೂಲಿ ಕಾರ್ಮಿಕರ ಹಸಿವು ಇಂಗಿಸಲು ಶುಲ್ಕ-ರಹಿತ ದೂರವಾಣಿ ಲೋಕಾರ್ಪಣೆ

ಮುಖ್ಯಮಂತ್ರಿಯವರ ಸೂಚನೆಯ ಮೇರೆಗೆ, ಕರ್ನಾಟಕದಲ್ಲಿ ಕೊರೊನಾ ವೈರಾಣು 19 (ಕೋವಿಡ್-19) ಕುರಿತ ಅಧಿಕೃತ ಮಾಹಿತಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ  ರೂಪಿಸಿರುವ ವೆಬ್‍ಸೈಟ್ ಹಾಗೂ ಅನ್ನವಿಲ್ಲದ ಬಡ ಕೂಲಿ ಕಾರ್ಮಿಕರ ಹಸಿವು ಇಂಗಿಸಲು ಕಾರ್ಮಿಕ ಇಲಾಖೆ ಸ್ಥಾಪಿಸಿರುವ ಶುಲ್ಕ-ರಹಿತ ದೂರವಾಣಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಅವರು  ಶನಿವಾರ ಲೋಕಾರ್ಪಣೆ ಮಾಡಿದರು.
ಇಡೀ ವಿಶ್ವವನ್ನೇ ಕಾಡುತ್ತಿರುವ ಕೋವಿಡ್-19 ರ ಉಪಟಳ ಅತೀ ಶೀಘ್ರದಲ್ಲೇ ಅಂತ್ಯಗೊಳ್ಳಲಿ. ಮುಂದೆಂದೂ ಮನುಕುಲಕ್ಕೆ ಇಂತಹ ಸಮಸ್ಯೆಗಳು ಕಾಡದಿರಲಿ ಎಂಬ ಶುಭ ಹಾರೈಕೆಯೊಂದಿಗೆ ಈ ವಿಶೇಷ ಸಂದರ್ಭಕ್ಕೆಂದೇ ರೂಪಿಸಿರುವ ಕೋವಿಡ್-19 ರ ಅಧಿಕೃತ ವೆಬ್‍ಸೈಟ್ :   https://covid19.karnataka.gov.in/wordpress/     ಗೆ ಸಚಿವರು ಚಾಲನೆ ನೀಡಿದರು.
ಅಲ್ಲದೆ, ಇದೇ ಸಂದರ್ಭದಲ್ಲಿ ಬಡ ಕೂಲಿ ಕಾರ್ಮಿಕರು ಹಾಗೂ ವಲಸೆ ಬಂದಿರುವ ಕಾರ್ಮಿಕರ ಹಸಿವನ್ನು ನೀಗಿಸಲು ಕಾರ್ಮಿಕ ಇಲಾಖೆಯ ಸಹಾಯವಾಣಿ : 155214 ಕರೆ ಮಾಡುವ ಮೂಲಕ ಸಚಿವರು ಲೋಕಾರ್ಪಣೆ ಮಾಡಿದರು.
ವೆಬ್‍ಸೈಟ್ ವೈಶಿಷ್ಠ್ಯ !
ಮುಖ್ಯಮಂತ್ರಿಯವರ ಸಂದೇಶ, ಸಹಾಯವಾಣಿ ಮಾಹಿತಿ,  ನಾವು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಕೋವಿಡ್-19 ರ ಗುಣ-ಲಕ್ಷಣಗಳು, 21 ದಿನಗಳ ಲಾಕ್‍ಡೌನ್ ವಿವರ, ಸ್ವಯಂಸೇವಕರಾಗಿ ಸೇರಬಯಸುವವರಿಗೆ ಅವಕಾಶ ಹಾಗೂ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳಿಗೆ ಉತ್ತರಗಳು,  ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತು ಬಲಿಯಾದವರ ಸಂಖ್ಯೆ  ಒಳಗೊಂಡಂತೆ ಕೋವಿಡ್-19 ದೃಢಪಟ್ಟಿರುವವರ ಅಂಕಿ-ಸಂಖ್ಯೆ  ಕುರಿತ ತಾಜಾ ಮಾಹಿತಿ ಈ ವೆಬ್‍ಸೈಟ್‍ನಲ್ಲಿ ಲಭ್ಯವಿದೆ.
ಸಹಾಯವಾಣಿಯ ವಿಶೇಷ:
ಅನ್ನವಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಕೂಲಿಕಾರರು ಸಹಾಯವಾಣಿಗೆ ಕರೆ ಮಾಡಿದಲ್ಲಿ ಅವರು ಎಲ್ಲಿಂದ ಕರೆ ಮಾಡಿದ್ದಾರೆ ? ಎಂಬುದನ್ನು ದೃಢಪಡಿಸಿಕೊಂಡು ಸಮೀಪದ ಇಂದಿರಾ ಕ್ಯಾಂಟೀನ್ ಅಥವಾ ಸರ್ಕಾರೇತರ ಸಂಘ-ಸಂಸ್ಥೆಗಳ ನೆರವಿನಿಂದ ಅವರು ಇದ್ದಲ್ಲೇ ಊಟದ ವ್ಯವಸ್ಥೆ ಮಾಡಲು ಸಹಾಯವಾಣಿ ನೆರವು ಒದಗಿಸಲಿದೆ.  ಅಲ್ಲದೆ, ಬೇರೆ ಊರುಗಳಿಂದ ಬಂದು ನೆಲ ಇಲ್ಲದ ಜನರಿಗೆ ನೆಲೆ ಒದಗಿಸುವ ಪ್ರಯತ್ನವನ್ನೂ ಸಹಾಯವಾಣಿ ಮಾಡಲಿದೆ. ಜೊತೆಗೆ, ಸಾವು ಇನ್ನಿತರ ಸಂದರ್ಭದಲ್ಲಿ ತಮ್ಮ ಊರಿಗೆ ತೆರಳಬೇಕಾದ ಸಂಕಷ್ಟ ಎದುರಿಸುತ್ತಿರುವ ಕೂಲಿ ಕಾರ್ಮಿಕರಿಗೂ ಸಹಾಯವಾಣಿ ಸಹಾಯಕ್ಕೆ ಬರಲಿದೆ ಎಂದು ಸಚಿವರು ತಿಳಿಸಿದರು.