ಕೋವಿಡ್-19 ನಾಲ್ಕನೇ ಅಲೆ ಹಿನ್ನೆಲೆ: ಮತ್ತೆ ಮಾಸ್ಕ್ ಬಳಕೆ ಕಡ್ಡಾಯವೆಂದ ಆರೋಗ್ಯ ಸಚಿವ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಕೋವಿಡ್ ನಿಯಂತ್ರಣದ ಕುರಿತು ಟಾಸ್ಕ್ ಫೋರ್ಸ್ ಸಭೆ ನಡೆದಿದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮಾರ್ಗಸೂಚಿ ಹೊರಡಿಸಲು ಸರ್ಕಾರ ನಿರ್ಧರಿಸಿದೆ.

ಸಭೆ ನಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ. ಸುಧಾಕರ್, ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದು, ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಕಡ್ಡಾಯ ಮಾಸ್ಕ್ ಧರಿಸುವುದೂ ಒಂದು ಎಂದಿರುವ ಅವರು ಈ ಬಗ್ಗೆ ಶೀಘ್ರವೆ ಮಾರ್ಗಸೂಚಿ ಹೊರಡಿಸುವುದಾಗಿ ತಿಳಿಸಿದ್ದಾರೆ.

ಇದರ ಜೊತೆ ಸಭೆ ಸಮಾರಂಭಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮತ್ತು ಲಸಿಕೆ ಹಾಕಿಸಿಕೊಳ್ಳದವರು ಆದಷ್ಟು ಬೇಗನೆ ಒಂದನೆ ಮತ್ತು ಎರಡನೇ ಡೋಸ್ ಲಸಿಕೆಗಳನ್ನು ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಕೋವಿಡ್-19 ನಾಲ್ಕನೇ ಅಲೆ ಕುರಿತು ಪ್ರಧಾನಿ ಮೋದಿಯವರು ನಿರ್ದೇಶನಗಳನ್ನು ನೀಡಲಿದ್ದು, ಆ ಬಳಿಕ ಸಭೆ ನಡೆಸಿ ಮುಂದುವರಿಯಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.