ಉಡುಪಿ: ಇಲ್ಲಿನ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿಯು ಪ್ರವೀಣ್ ಚೌಗುಲೆ ಮೃತ ಅಯ್ನಾಜ್ ನ ಮನೆಯ ವಿಳಾಸವನ್ನು ಆಕೆಯ ಸ್ನ್ಯಾಪ್‌ಚಾಟ್ ಖಾತೆಯ ಮೂಲಕ ಟ್ರ್ಯಾಕ್ ಮಾಡಿದ್ದ ಎಂದು ಮಾಹಿತಿ ನೀಡಿದ್ದಾರೆ.
ಪ್ರವೀಣ್ ಚೌಗುಲೆಯನ್ನು ಉಡುಪಿಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಡಿಸೆಂಬರ್ 5 ರವರೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಹಿರಿಯಡ್ಕ ಉಪ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಇದೀಗ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಪ್ರವೀಣ್ ಚೌಗಲೆ, ತಾನು ಮಹಾರಾಷ್ಟ್ರ ಪೊಲೀಸರೊಂದಿಗೆ ಕೆಲಸ ಮಾಡುತ್ತಿದ್ದು, ಚಿನ್ನ ಕಳ್ಳಸಾಗಣೆಯಲ್ಲಿ ತೊಡಗಿದ್ದಕ್ಕಾಗಿ ಸೇವೆಯಿಂದ ತೆಗೆದುಹಾಕಲಾಗಿತ್ತು ಎಂದು ಪೊಲೀಸರಿಗೆ ತಿಳಿಸಿರುವುದಾಗಿ ವರದಿಯಾಗಿದೆ.
ಚೌಗಲೆ ಅವರು ಗಗನಸಖಿ ಐನಾಜ್ ಅವರೊಂದಿಗೆ ಸ್ನೇಹ ಹೊಂದಿದ್ದರೂ ಅವರ ಮನೆ ಅವರಿಗೆ ತಿಳಿದಿರಲಿಲ್ಲ ಎಂದು ತನಿಖೆಯಲ್ಲಿ ತೊಡಗಿರುವ ಹೆಸರು ಹೇಳಲಿಚ್ಛಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಮೃತ ಅಯ್ನಾಜ್ ತನ್ನ ಸ್ನಾಪ್ ಚಾಟ್ ಖಾತೆಯಲ್ಲಿ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿದ್ದ ಸಂದರ್ಭದಲ್ಲಿ ಲೊಕೇಶನ್ ಬಳಿಸಿದ್ದನ್ನು ಟ್ರ್ಯಾಕ್ ಮಾಡಿ ಆಕೆಯ ಮನೆ ಪತ್ತೆಹಚ್ಚಿದ್ದಾನೆ ಎಂದು ಅಧಿಕಾರಿ ಹೇಳಿಕೊಂಡಿರುವುದಾಗಿ ಮಾಧ್ಯಮ ವರದಿಯಾಗಿದೆ.