ಬೆಂಗಳೂರು : ರಾಜ್ಯದಲ್ಲಿ ಬಹುನಿರೀಕ್ಷಿತ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದ ಸಂಪುಟಕ್ಕೆ ಯಾರಿಗೆ ಅವಕಾಶ ಸಿಗಲಿದೆ ಎಂಬ ಕುತೂಹಲಕ್ಕೆ ಇನ್ನೇನು ಕೆಲವೇ ಗಂಟೆಗಳಲ್ಲಿ ತೆರೆ ಬೀಳುವ ಸಾಧ್ಯತೆ ಇದೆ. ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಡೆದಿದ್ದಾರೆ ಎನ್ನಲಾದ ‘ಸೀಕ್ರೆಟ್ ರಿಪೋರ್ಟ್’ ಸಂಪುಟ ವಿಸ್ತರಣೆಗೆ ಹೊಸ ಟ್ವಿಸ್ಟ್ ನೀಡಿದೆ.
ಮೂಲಗಳ ಪ್ರಕಾರ, ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮದೇ ಆದ ಸಂಭಾವ್ಯ ಸಚಿವರ ಪಟ್ಟಿಯನ್ನು ಹೈಕಮಾಂಡ್ಗೆ ಸಲ್ಲಿಸಿದ್ದಾರೆ. ಇದರ ಜೊತೆಗೆ ರಾಹುಲ್ ಗಾಂಧಿ ಮೂರು ಪ್ರತ್ಯೇಕ ಮೂಲಗಳಿಂದ ವರದಿ ಪಡೆದು ಅಂತಿಮ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.
ಮಾಹಿತಿಯಂತೆ, ಚುನಾವಣಾ ತಂತ್ರಜ್ಞ ಸುನೀಲ್ ಕನಗೋಳು, ಸಂಸದ ಶಶಿಕಾಂತ್ ಸೆಂಥಿಲ್ ಹಾಗೂ ಖಾಸಗಿ ಸರ್ವೆ ಸಂಸ್ಥೆಯಿಂದಲೂ ರಾಹುಲ್ ಗಾಂಧಿ ವರದಿ ಪಡೆದಿದ್ದಾರೆ. ಆಕಾಂಕ್ಷಿ ಶಾಸಕರ ಹಿನ್ನೆಲೆ, ಪಕ್ಷ ಸಂಘಟನೆ, ಜಾತಿ ಸಮೀಕರಣ, ಭವಿಷ್ಯದ ನಾಯಕತ್ವ, ಚುನಾವಣಾ ಲೆಕ್ಕಾಚಾರ ಹಾಗೂ ಸಚಿವ ಸ್ಥಾನ ನೀಡಿದರೆ ಪಕ್ಷಕ್ಕೆ ಆಗುವ ಲಾಭ-ನಷ್ಟಗಳ ಕುರಿತು ಈ ವರದಿಯಲ್ಲಿ ವಿವರಗಳಿವೆ ಎನ್ನಲಾಗಿದೆ.
ಈ ವರದಿಗಳ ಆಧಾರದ ಮೇಲೆ ರಾಜ್ಯ ನಾಯಕರೊಂದಿಗೆ ರಾಹುಲ್ ಗಾಂಧಿ ಚರ್ಚೆ ನಡೆಸಿ ಅಂತಿಮ ಪಟ್ಟಿಗೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ.
ಸಚಿವ ಸ್ಥಾನಕ್ಕೆ ಕೇಳಿಬರುತ್ತಿರುವ ಪ್ರಮುಖ ಹೆಸರುಗಳು
- ಲಕ್ಷ್ಮಣ ಸವದಿ (ಅಥಣಿ)
- ಎಚ್.ಸಿ. ಬಾಲಕೃಷ್ಣ (ಮಾಗಡಿ)
- ಶರತ್ ಬಚ್ಚೇಗೌಡ (ಹೊಸಕೋಟೆ)
- ಕೆ.ಎಂ. ಶಿವಲಿಂಗೇಗೌಡ (ಅರಸೀಕೆರೆ)
- ಬಿ. ಶಿವಣ್ಣ (ಆನೇಕಲ್)
- ಎಂ. ಕೃಷ್ಣಪ್ಪ (ವಿಜಯನಗರ)
- ಯಶವಂತರಾಯ ಗೌಡ ಪಾಟೀಲ್ (ಇಂಡಿ)
- ಅಪ್ಪಾಜಿ ನಾಡಗೌಡ (ಮುದ್ದೇಬಿಹಾಳ)
- ಅಜಯ್ ಸಿಂಗ್ (ಜೇವರ್ಗಿ)
- ಎಸ್.ಎಸ್. ಮಲ್ಲಿಕಾರ್ಜುನ (ದಾವಣಗೆರೆ ಉತ್ತರ)
- ಮಧು ಬಂಗಾರಪ್ಪ (ಸೊರಬ)
- ಚೆಲುವರಾಯಸ್ವಾಮಿ (ನಾಗಮಂಗಲ)
- ಬಿ. ನಾಗೇಂದ್ರ (ಬಳ್ಳಾರಿ ಗ್ರಾಮಾಂತರ)
- ಲಕ್ಷ್ಮೀ ಹೆಬ್ಬಾಳ್ಕರ್ (ಬೆಳಗಾವಿ ಗ್ರಾಮಾಂತರ)
- ಪುಟ್ಟರಂಗ ಶೆಟ್ಟಿ (ಚಾಮರಾಜನಗರ)
- ತನ್ವೀರ್ ಸೇಠ್ (ನರಸಿಂಹರಾಜ)
- ರಿಜ್ವಾನ್ ಅರ್ಷದ್ (ಶಿವಾಜಿನಗರ)
- ಎನ್.ಎ. ಹ್ಯಾರಿಸ್ (ಶಾಂತಿನಗರ)
- ಜಮೀರ್ ಅಹ್ಮದ್ ಖಾನ್ (ಚಾಮರಾಜಪೇಟೆ)
- ಟಿ. ರಘುಮೂರ್ತಿ (ಚಳ್ಳಕೆರೆ)
- ಎ.ಎಸ್. ಪೊನ್ನಣ್ಣ (ವಿರಾಜಪೇಟೆ)
- ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್
- ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ
- ವಿಧಾನ ಪರಿಷತ್ ಸದಸ್ಯೆ ಆರತಿ ಕೃಷ್ಣ
ಮೂಲಗಳ ಮಾಹಿತಿ ಪ್ರಕಾರ, ಈ ಪಟ್ಟಿಯಲ್ಲಿರುವ 18 ಮಂದಿಗೆ ಸಚಿವ ಸ್ಥಾನ ಬಹುತೇಕ ಖಚಿತ ಎನ್ನಲಾಗುತ್ತಿದೆ. ಆದರೆ ಅಂತಿಮ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್ ಪ್ರಕಟಿಸಿದ ಬಳಿಕವೇ ಅಧಿಕೃತ ಚಿತ್ರಣ ಸ್ಪಷ್ಟವಾಗಲಿದೆ.















