ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ಮತದಾನಕ್ಕೆ ಕ್ಷಣಗಣನೆ: ಚುನಾವಣೆಯ ಬಿಸಿಯ ಜೊತೆಗೆ ಏರುತ್ತಿದೆ ಸೂರ್ಯನ ತಾಪ

ಬೆಂಗಳೂರು: ಒಂದೆಡೆ ಲೋಕಸಭಾ ಚುನಾವಣೆಯ (Loksabha Elections) ಬಿಸಿ ಮತ್ತೊಂದೆಡೆ ಬಿಸಿಯೇರುತ್ತಿರುವ ಭೂಮಿ ಇವೆರಡರ ಮಧ್ಯದಲ್ಲಿ ಹೈರಾಣಾಗಿರುವ ಜನರು. ನಾಳೆ ಮೂರನೇ ಹಂತದ ಮತದಾನ ನಡೆಯಲಿದ್ದು, ಮಂಗಳವಾರ ಬೆಳಿಗ್ಗೆ 7 ಗಂಟೆಯಿಂದ 14 ಕ್ಷೇತ್ರಗಳ ಮತದಾನ ಆರಂಭವಾಗುವ ಹಿನ್ನೆಲೆಯಲ್ಲಿ ಭಾನುವಾರ ಸಂಜೆ 6 ಗಂಟೆಯಿಂದ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಸೋಮವಾರ ಇಡೀ ದಿನ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಮನೆ ಮನೆ ಪ್ರಚಾರ ನಡೆಸಲಿದ್ದಾರೆ. ಈ ಮಧ್ಯೆ ಮೇ 5 ರಿಂದ ಮೇ 7 ರ ಅವಧಿಯಲ್ಲಿ ಕರ್ನಾಟಕದ ಒಳಭಾಗದ ಪ್ರತ್ಯೇಕ ಕಡೆಗಳಲ್ಲಿ ಶಾಖದ ಅಲೆ ತೀವ್ರತರವಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಕರ್ನಾಟಕ ಪ್ರದೇಶಗಳಲ್ಲಿ ಚುನಾವಣೆಯ ದಿನದಂದು ತಾಪಮಾನವು 45-46 ಡಿಗ್ರಿ ಸೆಲ್ಸಿಯಸ್‌ಗೆ ಏರುವ ಸಾಧ್ಯತೆಗಳಿವೆ ಎಂದು ಇಲಾಖೆ ಎಚ್ಚರಿಕೆಯನ್ನು ನೀಡಿದೆ.

ರಾಜ್ಯದಲ್ಲಿ ಗಮನ ಸೆಳೆದಿರುವ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ(ಎಸ್ಸಿ ಮೀಸಲು), ಕಲಬುರಗಿ(ಎಸ್ಸಿ), ರಾಯಚೂರು(ಎಸ್ಟಿ ಮೀಸಲು), ಬೀದರ್, ಕೊಪ್ಪಳ, ಬಳ್ಳಾರಿ(ಎಸ್ಟಿ), ಹಾವೇರಿ, ಧಾರವಾಡ, ಉತ್ತರಕನ್ನಡ, ದಾವಣಗೆರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಶೋರಾಪುರ ವಿಧಾನಸಭಾ ಕ್ಷೇತ್ರಕ್ಕೂ ನಾಳೆಯೇ ಚುನಾವಣೆ ನಡೆಯಲಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ತಲಾ ಒಬ್ಬರು, ನಾಲ್ವರು ಸ್ವತಂತ್ರರು ಕಣಕ್ಕಿಳಿದಿದ್ದಾರೆ. ಸ್ಪರ್ಧಾಕಣದಲ್ಲಿ 206 ಪುರುಷರು ಹಾಗೂ 21 ಮಹಿಳೆಯರು ಸೇರಿದಂತೆ ಒಟ್ಟು 227 ಮಂದಿ ಇದ್ದಾರೆ.

ಮತದಾನದ ಪ್ರಮಾಣವನ್ನು ಹೆಚ್ಚಿಸಲು ಮತ್ತು ಜನರು ತಮ್ಮ ಮತಗಟ್ಟೆಯನ್ನು ಹುಡುಕಲು ಸಹಾಯ ಮಾಡಲು, ಚುನಾವಣಾ ಅಧಿಕಾರಿಗಳು ಪ್ರತಿ ವೋಟಿಂಗ್ ಸ್ಲಿಪ್‌ನ ಹಿಂದೆ ಕ್ಯೂಆರ್ ಕೋಡ್ ಅನ್ನು ಮುದ್ರಿಸಿದ್ದಾರೆ. ಅದನ್ನು ಸ್ಕ್ಯಾನ್ ಮಾಡಿದ ಕೂಡಲೇ ಜಿಪಿಎಸ್ ತಂತ್ರಜ್ಞಾನವನ್ನು ಬಳಸಿಕೊಂಡು ಮತದಾರರನ್ನು ಬೂತ್‌ಗೆ ನಿರ್ದೇಶಿಸುತ್ತದೆ. ಇದರ ಜೊತೆಗೆ ಆಯೋಗವು ವೋಟರ್ ಹೆಲ್ಪ್ ಲೈನ್ ಎಂಬ ಅಪ್ಲಿಕೇಶನ್ ಅನ್ನು ಕೂಡ ಬಿಡುಗಡೆ ಮಾಡಿದೆ, ಇದನ್ನು ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು. ಇದು ಮತಗಟ್ಟೆ ಕುರಿತು ಮಾಹಿತಿ ನೀಡುತ್ತದೆ. ಸರದಿಯಲ್ಲಿರುವ ಜನರ ಸಂಖ್ಯೆ, ಪಾರ್ಕಿಂಗ್ ಸೌಲಭ್ಯ ಮತ್ತು ಇತರ ವಿವರಗಳು ಇದರಿಂದ ಲಭ್ಯವಾಗಲಿದೆ.

ನಾಳೆ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಮತದಾನದ ದಿನ ಚುನಾವಣಾ ಆಯೋಗದ ಅಧಿಕಾರಿಗಳು ಮತ್ತು ಮತದಾರರಿಗೆ ಬಿಸಿಗಾಳಿಯನ್ನು ಎದುರಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸುವ ಸಾಧ್ಯತೆಗಳಿವೆ.

ಕೆಲ ರಾಜಕೀಯ ನಾಯಕರು ಮತದಾನವನ್ನು ಸಂಜೆ 6 ಗಂಟೆಗೂ ಮೀರಿ ವಿಸ್ತರಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿವೆ. ಆದರೆ, ಆಯೋಗ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.