ವೈದ್ಯರ ಚೀಟಿಯಿಲ್ಲದೇ ಇನ್ನು ಕೆಮ್ಮಿನ ಸಿರಪ್ ಸಿಗಲ್ಲ!ಆರೋಗ್ಯ ಸಚಿವಾಲಯದ ಕಟ್ಟುನಿಟ್ಟಿನ ಆದೇಶ

ನವದೆಹಲಿ: ದೇಶದಾದ್ಯಂತ ಕೆಮ್ಮಿನ ಸಿರಪ್ಗಳು ಸೇರಿದಂತೆ ವಿವಿಧ ಔಷಧೀಯ ಸಿರಪ್ಗಳ ಖರೀದಿ ಮತ್ತು ಮಾರಾಟದ ನಿಯಮಗಳಲ್ಲಿ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ತಂದಿದೆ. ಇನ್ನು ಮುಂದೆ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೆಮ್ಮಿನ ಸಿರಪ್ಗಳನ್ನು ಔಷಧಾಲಯಗಳಿಂದ ಖರೀದಿಸಲು ಸಾಧ್ಯವಾಗುವುದಿಲ್ಲ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 1945ರ ಡ್ರಗ್ಸ್ ನಿಯಮಗಳಿಗೆ ತಿದ್ದುಪಡಿ ಮಾಡಿ ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ನೋಂದಾಯಿತ ವೈದ್ಯರು ನೀಡುವ ಪ್ರಿಸ್ಕ್ರಿಪ್ಷನ್ ಕಡ್ಡಾಯಗೊಳಿಸಿದೆ. ಇದುವರೆಗೆ ಕೆಮ್ಮು ಅಥವಾ ಶೀತದ ಸಮಸ್ಯೆ ಎದುರಾದಾಗ ಜನರು ನೇರವಾಗಿ ಮೆಡಿಕಲ್ ಶಾಪ್‌ಗೆ ತೆರಳಿ ಕೌಂಟರ್ ಮೇಲಿಂದಲೇ ಕೆಮ್ಮಿನ ಸಿರಪ್ಗಳನ್ನು ಖರೀದಿಸುತ್ತಿದ್ದರು. ಆದರೆ ಹೊಸ ನಿಯಮ ಜಾರಿಯಾದ ಬಳಿಕ ಈ ರೀತಿಯ ಓವರ್-ದಿ-ಕೌಂಟರ್ (OTC) ಮಾರಾಟಕ್ಕೆ ಸಂಪೂರ್ಣ ತಡೆ ಬಿದ್ದಿದೆ.

ಆರೋಗ್ಯ ಸಚಿವಾಲಯವು ಜೂನ್ 9ರಂದು ಜಾರಿಗೊಳಿಸಿದ ಡ್ರಗ್ಸ್ (ಐದನೇ ತಿದ್ದುಪಡಿ) ನಿಯಮಗಳು-2026ರ ಪ್ರಕಾರ, ಡ್ರಗ್ಸ್ ರೂಲ್ಸ್-1945ರ ವೇಳಾಪಟ್ಟಿ (Schedule) Kಯಲ್ಲಿದ್ದ “Syrup” ಎಂಬ ಪದವನ್ನು ತೆಗೆದುಹಾಕಲಾಗಿದೆ. ಈ ವೇಳಾಪಟ್ಟಿಯ ಅಡಿಯಲ್ಲಿ ಕೆಲವು ಔಷಧಿಗಳಿಗೆ ಪ್ರಿಸ್ಕ್ರಿಪ್ಷನ್ ವಿನಾಯಿತಿ ನೀಡಲಾಗುತ್ತಿತ್ತು. ಇದೀಗ ಸಿರಪ್ಗಳಿಗೆ ನೀಡಲಾಗಿದ್ದ ಆ ವಿನಾಯಿತಿಯನ್ನು ರದ್ದುಗೊಳಿಸಿರುವುದರಿಂದ, ಕೆಮ್ಮಿನ ಸಿರಪ್ಗಳು ಸೇರಿದಂತೆ ಹಲವು ಔಷಧೀಯ ಸಿರಪ್ಗಳನ್ನು ವೈದ್ಯರ ಚೀಟಿ ಇಲ್ಲದೆ ಮಾರಾಟ ಮಾಡಲು ಅವಕಾಶ ಇರುವುದಿಲ್ಲ.

ಹೀಗಾಗಿ, ಇನ್ನು ಮುಂದೆ “ಸಿರಪ್ ಕೊಡಿ” ಎಂದು ಹೇಳಿ ಸುಲಭವಾಗಿ ಔಷಧಿ ಪಡೆಯುವ ವ್ಯವಸ್ಥೆಗೆ ತೆರೆ ಬಿದ್ದಿದ್ದು, ವೈದ್ಯರ ಸಲಹೆ ಮತ್ತು ಪ್ರಿಸ್ಕ್ರಿಪ್ಷನ್ ಆಧಾರದ ಮೇಲೆಯೇ ಕೆಮ್ಮಿನ ಸಿರಪ್ಗಳನ್ನು ಪಡೆಯಬೇಕಾಗಿದೆ. ಸಾರ್ವಜನಿಕರ ಆರೋಗ್ಯ ಸುರಕ್ಷತೆ ಹಾಗೂ ಔಷಧಿಗಳ ದುರುಪಯೋಗ ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಸಚಿವಾಲಯ ತಿಳಿಸಿದೆ.