ಉತ್ತರ ಭಾರತದ ಕಡೆ ಹೋಳಿ ಹಬ್ಬಕ್ಕೇ ತುಸು ಹೆಚ್ಚಿನ ಆದ್ಯತೆ ನೀಡಲಾಗುತ್ತೆ. ಅದರಲ್ಲೂ ಈ ಹಬ್ಬದ ಸಂದರ್ಭದಲ್ಲಿ ಸಿಹಿತಿಂಡಿಗೆ ಇರುವಷ್ಟು ಬೇಡಿಕೆ ಬೇರೆ ಯಾವುದಕ್ಕೂ ಇಲ್ಲ. ಇದೀಗ ಉತ್ತರಪ್ರದೇಶದ ಗುಜಿಯಾ ಎಂದು ಕರೆಯಲಾಗುವ ಒಂದು ಬಗೆಯ ಫೇಮಸ್ ಸಿಹಿತಿಂಡಿ ಬೆಲೆಯ ಕಾರಣಕ್ಕೆ ಭಾರೀ ಸುದ್ದಿಯಲ್ಲಿದೆ. ಅಂದ ಹಾಗೆ ಈ ಸಿಹಿತಿಂಡಿಯ ರೇಟು ಬರೋಬ್ಬರಿ ಪ್ರತಿ ಕಿಲೋಗೆ 50,000 ರೂಪಾಯಿ. ಹೌದು ಅಂದರೆ ಒಂದು ಪೀಸ್ ನ ಬೆಲೆ 1,300, ಅಂತದ್ದೇನಿದೆಯಪ್ಪಾ ಈ ಸಿಹಿತಿಂಡಿಯಲ್ಲಿಎಂದು ನೀವು ಕೇಳಬಹುದು. ಉತ್ತರ ಸಿಂಪಲ್, ಇದು ‘ಗೋಲ್ಡನ್ ಗುಜಿಯಾ’, ಅಂದ್ರೆ ಚಿನ್ನದ ಲೇಪನವಿರುವ ಕರ್ಜಿಕಾಯಿ. ಇದರ ಮೇಲೆ 24 ಕ್ಯಾರಟ್ ನ ಚಿನ್ನದ ತೆಳುವಾದ ಲೇಪನ ಅಂಟಿಸಲಾಗಿದೆಯಂತೆ. ಬರೀ ಚಿನ್ನ ಅಲ್ಲ ಬೆಳ್ಳಿಯ ಲೇಪನ ಕೂಡ ಇದೆಯಂತೆ. ಅಲ್ಲದೇ ಭಾರೀ ಗುಣಮಟ್ಟದ ದುಬಾರಿ ಡ್ರೈಪ್ರೂಟ್ಸ್ ಗಳನ್ನೂ ಕೂಡ ಈ ತಿಂಡಿಗೆ ಸೇರಿಸಲಾಗಿರುವ ಕಾರಣ ಇದರ ಬೆಲೆ ಕೆ.ಜಿ 50000 ರೂಪಾಯಿ. ಚಿನ್ನ ಬೆಳ್ಳಿ ತಿಂತಾರಾ ಅನ್ನುವ ಪ್ರಶ್ನೆಗೆ “ಏನೂ ಸಮಸ್ಯೆಯಿಲ್ಲ, ಇದು ಅತ್ಯಂತ ಸುರಕ್ಷಿತ ತಿಂಡಿ ಎನ್ನುತ್ತಾರೆ ಅಂಗಡಿಯ ವ್ಯವಸ್ಥಾಪಕ. ಜೊತೆಗೆ ಇದು ಶ್ರೀಮಂತ ಗ್ರಾಹಕರನ್ನು ಸೆಳೆಯಲು ಮಾಡಿದ ಸಿಹಿತಿಂಡಿ ಎಂದೂ ಹೇಳುತ್ತಾರೆ.

ಉತ್ತರ ಪ್ರದೇಶದಲ್ಲಿ ಹೋಳಿ ಸಮಯದಲ್ಲಿ ಅತ್ಯಂತ ದುಬಾರಿ ಸಿಹಿತಿಂಡಿಗಳನ್ನು ಖರೀದಿಸುವುದೇ ಇಲ್ಲಿನ ಜನರಿಗೆ ಖುಷಿಯ ವಿಚಾರವಂತೆ. ಅಂತವರನ್ನು ಸೆಳೆಯಲು ಈ ತಿಂಡಿ ತಯಾರಕರು ಈ ಗಿಮಿಕ್ ಮಾಡಿದ್ದಾರೆ. ಎಲ್ಲೆಲ್ಲೂ ಚಿನ್ನ ಬೆಳ್ಳಿಯಾಗಿರುವಾಗ ಈಗ ತಿಂಡಿಯಲ್ಲೂ ಚಿನ್ನ ಬಂದಿರುವುದು ಚಿನ್ನ ಪ್ರೀಯರಿಗೆ ಖುಷಿಯ ಸುದ್ದಿಯಂತೆ!












