ಕೊರೋನಾ ವೈರಸ್ ಹರಡುವಿಕೆ ಕುರಿತು ಸೈನಿಕರಿಗೆ ತರಬೇತಿ

ಉಡುಪಿ ಮಾ.23: ಕೊರೋನಾ ವೈರಾಣು ಹರಡುವಿಕೆ ಕುರಿತಾಗಿ ವಿವಿಧ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಮೂಡಿಬರುವ ವದಂತಿಗಳನ್ನು ಪರಾಮರ್ಶಿಸಿ , ನೈಜ ಮಾಹಿತಿ ಕೂಡುವ ಬಗ್ಗೆ ಹಾಗೂ ಸ್ಥಳಿಯ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಲು , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ಹಾಗೂ ಕಾರ್ಮಿಕ ತರಬೇತಿ ಸಂಸ್ಥೆ ಇವರ ಸಹಭಾಗಿತ್ವದಲ್ಲಿ , ಸ್ವಯಂ ಸೇವಕರಾಗಿ ನೊಂದಾಯಿಸಿರುವ ಕೊರೋನಾ ಸೈನಿಕರಿಗೆ  ಉಡುಪಿಯ ವಾರ್ತಾ ಭವನದಲ್ಲಿ ಸೋಮವಾರ ಮಾಹಿತಿ ನೀಡಲಾಯಿತು.

ಕೊರೊನಾ ಕುರಿತು ಅನಗತ್ಯ ವದಂತಿಗಳಿಂದ ಜನರಲ್ಲಿ ಆತಂಕ ಮೂಡುತ್ತದೆ ಅಲ್ಲದೇ ಆರೋಗ್ಯ ಸೇವೆ ನೀಡುವವರಿಗೆ ಹೆಚ್ಚಿನ ಒತ್ತಡ ಬೀಳಲಿದೆ, ಕೊರೋನಾ ಸೈನಿಕರು ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಇಂತಹ ವಿದ್ಯಮಾನ ಕಂಡು ಬಂದಲ್ಲಿ ಕೂಡಲೇ ಅಧಿಕಾರಿಗಳ ಗಮನಕ್ಕೆ ತರಬೇಕು, ಯಾವುದೇ ವದಂತಿ ಮಾಹಿತಿ ಬಂದಾಗ, ಅಗತ್ಯವಿದ್ದಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ನೈಜ ವರದಿ ನೀಡಬೇಕು ಎಂದು, ತರಬೇತಿ ನೀಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಶಿವಕುಮಾರ್ ತಿಳಿಸಿದರು. ಹಾಗೂ ಕೊರೋನಾ ಸೈನಿಕರಿಗೆ  ಅಗತ್ಯ ಮಾಹಿತಿ ಮತ್ತು ಮಾರ್ಗಸೂಚಿಗಳ ಬಗ್ಗೆ ವಿವರಿಸಿದರು.

ಉಡುಪಿ ಜಿಲ್ಲೆಯಲ್ಲಿ ಕೊರೋನ ಸೈನಿಕರಾಗಿ ಕಾರ್ಯ ನಿರ್ವಹಿಸಲು  ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ 48 ಮಂದಿ ಸ್ವಯಂ ಸೇವಕರಾಗಿ ನೊಂದಾವಣೆ ಮಾಡಿಕೊಂಡಿದ್ದು, ಇವರಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆವತಿಯಿಂದ ಗುರುತಿನ ಚೀಟಿ ಮತ್ತು ಕಿಟ್ ಗಳನ್ನು ನೀಡಲಾಗುವುದು. ಇವರೆಲ್ಲರೂ ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ಕೊರೋನಾ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಹಾಗೂ ರೋಗದ ಬಗ್ಗೆ ನೈಜ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸುವಲ್ಲಿ ನೆರವಾಗಲಿದ್ದಾರೆ.