ನವದೆಹಲಿ: ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್ಐಆರ್) ಅಭಿವೃದ್ಧಿಪಡಿಸಿರುವ ‘ಫವಿಪಿರವಿರ್ (Favipiravir) ಔಷಧ’ವನ್ನು ಭಾರತದಲ್ಲಿ ಶೀಘ್ರವೇ ಬಿಡುಗಡೆ ಮಾಡಲು ಔಷಧ ಉತ್ಪಾದನಾ ಕಂಪನಿ ಸಿಪ್ಲಾ ಮುಂದಾಗಿದೆ.
ಈ ಔಷಧ ಕೋವಿಡ್–19 ಆರಂಭಿಕ ಹಂತದಲ್ಲಿರುವ ರೋಗಿಗಳಿಗೆ ಪರಿಣಾಮಕಾರಿಯಾಗಲಿದೆ ಎಂದು ಕ್ಲಿನಿಕಲ್ ಪರೀಕ್ಷೆಗಳಲ್ಲಿ ಸಾಬೀತಾಗಿದೆ. ಅಲ್ಲದೆ, ಕೊರೊನಾ ಸೋಂಕಿತರ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಕಡಿಮೆ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಸಿಎಸ್ಐಆರ್ ಮತ್ತು ಭಾರತೀಯ ರಾಸಾಯನಿಕ ತಂತ್ರಜ್ಞಾನ ಸಂಸ್ಥೆಯು ಸ್ಥಳೀಯವಾಗಿ ಲಭ್ಯವಿರುವ ಕಚ್ಚಾವಸ್ತುಗಳನ್ನು ಬಳಸಿಕೊಂಡು ಹೊಸ ಎಪಿಐ (ಔಷಧ ಸಂಯುಕ್ತ) ಅಭಿವೃದ್ಧಿಪಡಿಸಿತ್ತು. ಔಷಧ ಉತ್ಪಾದನೆಗೆಂದು ಈ ತಂತ್ರಜ್ಞಾನವನ್ನು ನಂತರ ಸಿಪ್ಲಾ ಕಂಪನಿಗೆ ಹಸ್ತಾಂತರಿಸಲಾಯಿತು.
ಸಿಪ್ಲಾ ಕಂಪೆನಿಯು ಔಷಧ ನಿಯಂತ್ರಣ ಮಹಾ ನಿರ್ದೇಶಕರನ್ನು ಸಂಪರ್ಕಿಸಿ ಈ ಔಷಧಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ಅನುಮತಿ ಕೋರಿತ್ತು. ಅದರಂತೆ ತುರ್ತು ಪರಿಸ್ಥಿತಿಯಲ್ಲಿ ಈ ಔಷಧಿ ಬಳಸಲು ಅನುಮತಿ ನೀಡಿ ಔಷಧ ನಿಯಂತ್ರಕರು ಅನುಮತಿ ನೀಡಿದರು. ಇದೀಗ ಕೋವಿಡ್–19ರ ಚಿಕಿತ್ಸೆಗೆ ಬಳಸಲು ಈ ಔಷಧಿ ಬಿಡುಗಡೆ ಮಾಡಲು ಇದೀಗ ಸಿಪ್ಲಾ ಸಿದ್ಧತೆ ಮಾಡಿಕೊಂಡಿದೆ’ ಎಂದು ಕಂಪನಿ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.