ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ವೇಗ ಪಡೆದುಕೊಂಡಿದ್ದು, ಇದರಿಂದ ದಿನೇ ದಿನೇ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದೆ. ಇದೀಗ ಉಡುಪಿ ನಗರಸಭೆಯ ಇಬ್ಬರು ಮಹಿಳಾ ಸದಸ್ಯಯರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.
ಮಂಗಳವಾರ ನಗರಸಭೆಯ ಅಧಿಕಾರಿಯೊಬ್ಬರಿಗೆ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ನಗರಸಭೆಯನ್ನು ಸೀಲ್ ಡೌನ್ ಮಾಡಿ ಸ್ಯಾನಿಟೈಸರ್ ಮಾಡಲಾಗಿದೆ. ಇದೀಗ ಇಬ್ಬರು ಮಹಿಳಾ ಸದಸ್ಯಯರಿಗೆ ಸೋಂಕು ಕಾಣಿಸಿಕೊಂಡಿರುವುದರಿಂದ ಮತ್ತಷ್ಟು ಆತಂಕ ಹೆಚ್ಚಾಗಿದೆ.
ಇಬ್ಬರು ಸದಸ್ಯೆಯರ ಪೈಕಿ ಓರ್ವ ಸದಸ್ಯೆ ಅನಾರೋಗ್ಯದ ಕಾರಣದಿಂದ ಕಳೆದ ಕೆಲ ದಿನಗಳಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ನಗರದ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಇಬ್ಬರಿಗೆ ಸೋಂಕು ಯಾವ ಮೂಲದಿಂದ ತಗುಲಿದೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಸೋಂಕಿನ ಮೂಲವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.