ವಿದ್ಯಾರ್ಥಿಗಳ ಪಾರ್ಟಿಯಿಂದ ಮಣಿಪಾಲದಲ್ಲಿ ಕೊರೊನಾ ಹೆಚ್ಚಳ: ಸಚಿವ ಡಾ. ಸುಧಾಕರ್

ಉಡುಪಿ: ಜಿಲ್ಲೆಯಲ್ಲಿ‌ ಕೊರೊನಾ ವ್ಯಾಪಕವಾಗಿ ಕಾಣಿಸಿಕೊಂಡಿದ್ದ ಮಣಿಪಾಲದ ಎಂಐಟಿ ಕ್ಯಾಂಪಸ್ ಗೆ ಇಂದು ಆರೋಗ್ಯ ಸಚಿವ ಡಾ. ಸುಧಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೋವಿಡ್ ನಿಯಮವನ್ನು ಸರಿಯಾಗಿ ಪಾಲಿಸದೇ ಇರುವುದು ಹಾಗೂ ಪರೀಕ್ಷೆ ಮುಗಿದ ಬಳಿಕ ಪಾರ್ಟಿ, ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರಿಂದ ಕೋವಿಡ್ ಹೆಚ್ಚಾಗಿರುವ ಸಾಧ್ಯತೆಗಳಿವೆ ಎಂದು ಹೇಳಿದರು.

ಈ ವಿದ್ಯಾಸಂಸ್ಥೆಯಲ್ಲಿ 8 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದು, ಮೂರು ಸಾವಿರದಷ್ಟು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವುದರಿಂದ ಕೊರೊನಾ ಹೆಚ್ಚಳವಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ಹೊರ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳನ್ನು ಕ್ಷೇಮವಾಗಿ ಊರಿಗೆ ಕಳುಹಿಸಿ ಕೊಡುವ ಕ್ರಮವನ್ನು ಆಡಳಿತ ಮಂಡಳಿ ನೋಡಿಕೊಳ್ಳುತ್ತಿದೆ ಎಂದು ತಿಳಿಸಿದರು.

ಈ ಒಂದೇ ಸಂಸ್ಥೆಯಲ್ಲಿ 950ಕ್ಕಿಂತಲೂ ಹೆಚ್ಚು ಪ್ರಕರಣ ದಾಖಲಾಗಿದ್ದು, ಈ ನಿಟ್ಟಿನಲ್ಲಿ ಸೋಂಕಿತರನ್ನು ಐಸೊಲೇಟ್ ಮಾಡೋದು ಬಹುಮುಖ್ಯವಾಗಿದೆ. ಕ್ಯಾಂಪಸ್‍ನಲ್ಲಿಯೇ ಸೋಂಕಿತರನ್ನು 14 ದಿನಗಳ ಕಾಲ ಐಸೊಲೇಟ್ ಮಾಡಲಾಗುತ್ತಿದೆ. ವಾರ್ಷಿಕ ಪರೀಕ್ಷೆಗಳು ನಡೆದ ನಂತರ ಸೋಂಕಿತರ ನೆಗೆಟಿವ್ ವರದಿ ನೋಡಿಕೊಂಡು ಮನೆಗೆ ಕಳುಹಿಸಿಕೊಡಲಾಗುತ್ತದೆ ಎಂದರು.

ತೀವ್ರತೆ ಇಲ್ಲದಿರುವುದೇ ಸಮಾಧಾನ: ಕ್ಯಾಂಪಸ್‍ನಲ್ಲಿ ಸೂಕ್ತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದರಂತೆ ಈಗಾಗಲೇ ಕ್ಯಾಂಪಸ್ ನಲ್ಲಿ 9000ಕ್ಕೂ ಹೆಚ್ಚು ಟೆಸ್ಟ್ ಮಾಡಲಾಗಿದೆ. ಸದ್ಯ ಸೋಂಕು ಪತ್ತೆಯಾಗಿರುವ ವಿದ್ಯಾರ್ಥಿಗಳಲ್ಲಿ ಸೋಂಕಿನ ತೀವ್ರತೆ ಕಂಡುಬಂದಿಲ್ಲ. ಕೆಲವರಲ್ಲಿ ಸೋಂಕು ಲಘುವಾಗಿ ಕಾಣಿಸಿಕೊಂಡಿದ್ದು, ಮತ್ತೆ ಕೆಲವರಲ್ಲಿ ಯಾವುದೇ ರೀತಿಯ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ ಎಂಬುದೇ ಸಮಾಧಾನಕರ ವಿಷಯ ಎಂದರು.