ನ್ಯೂಯಾರ್ಕ್: ಜಗತ್ತಿನ ದೊಡ್ಡಣ್ಣ ಅಮೆರಿಕಾದಲ್ಲಿ ಕೋವಿಡ್ ಡೆಲ್ಟಾ ರೂಪಾಂತರದ ಆರ್ಭಟ ಮುಂದುವರೆದಿದೆ. ಕೋವಿಡ್ ಡೆಲ್ಟಾ ರೂಪಾಂತರವು ಸಮುದಾಯದಲ್ಲಿ ಹರಡುತ್ತಿದ್ದು, ಲಸಿಕೆ ಪಡೆಯದೆ ಇದ್ದವರಲ್ಲಿ ಕಾಳ್ಗಿಚ್ಚಿನಂತೆ ಹರಡಿ ಸಾವುಗಳ ಸಂಖ್ಯೆ ಮಿಂಚಿನ ಗತಿಯಲ್ಲೇರುತ್ತಿವೆ. 14 ದಿನಗಳಲ್ಲಿ ಸೋಂಕಿನ ಪ್ರಮಾಣ ಶೇ. 21ರಷ್ಟು ಏರಿಕೆಯಾಗಿದ್ದು, ದಿನವೊಂದರ ಸಾವಿನ ಪ್ರಮಾಣ- 1,266 ರಷ್ಟಿದೆ.
ಅಮೆರಿಕಾದ ಒರೆಗಾನ್ ರಾಜ್ಯದಲ್ಲಿ ಕೋವಿಡ್ ನಿಂದ ಸಾವಿನ ಸಂಖ್ಯೆ ಏರುತ್ತಿದ್ದು, ಮೃತ ದೇಹಗಳನ್ನು ಸಾಗಿಸಲು ಶೈತ್ಯಾಗಾರ ಟ್ರಕ್ ವಿತರಣೆಯನ್ನು ಆರಂಭಿಸಲಾಗಿದೆ. ಈಗಾಗಲೇ ಒಂದು ಟ್ರಕ್ ಕಾರ್ಯಾಚರಣೆಯಲ್ಲಿದ್ದು ಇನ್ನೊಂದು ಟ್ರಕ್ನ್ನು ಕಳುಹಿಸಲಾಗುತ್ತಿದೆ ಎಂದು ರಾಜ್ಯ ತುರ್ತು ನಿರ್ವಹಣಾ ವಿಭಾಗ ತಿಳಿಸಿದೆ.
ಕೊರೊನಾ ಅಬ್ಬರಕ್ಕೆ ಅಮೆರಿಕಾದ ಹಲವೆಡೆ ICU ಗಳು ತುಂಬಿ ತುಳುಕುತ್ತಿದ್ದು, ಹಾಸಿಗೆ ಸಿಗದೆ ರೋಗಿಗಳು ಪರದಾಡೋ ಸ್ಥಿತಿ ನಿರ್ಮಾಣವಾಗಿದೆ. ಒಂದೇ ದಿನದಲ್ಲಿ 1,55,365 ಹೊಸ ಪ್ರಕರಣ ಪತ್ತೆಯಾಗಿದ್ದು, ಕೊರೊನಾ ರಣಕೇಕೆ ಹಾಕುತ್ತಿದೆ. ಇದರಿಂದ ಇತರೆ ರೋಗಿಗಳ ಚಿಕಿತ್ಸೆಗೂ ಪರದಾಟ ಶುರುವಾಗಿದೆ. 98,337 ಮಂದಿ ಒಂದೇ ದಿನ ಆಸ್ಪತ್ರೆಗೆ ದಾಖಲಾಗಿದ್ದು, ಶೇಕಡ 84ರಷ್ಟು ICU ಗಳು ಭರ್ತಿಯಾಗಿವೆ. ಈ ನಡುವೆ ಟಿಲ್ಲಮೂಕ್ ಕೌಂಟಿ ಆಯುಕ್ತರ ಮಂಡಳಿ ಕೋವಿಡ್ ಹರಡುವಿಕೆಯು “ನಿರ್ಣಾಯಕ ಹಂತವನ್ನು ತಲುಪಿದೆ ಎಂದು ಹೇಳಿ ಆತಂಕ ಸೃಷ್ಟಿಸಿದೆ.