ಉಡುಪಿ: ಅಕ್ಟೋಬರ್ 13 ಹಾಗೂ 14ರಂದು ನಡೆಯಲಿರುವ ಡಿಪ್ಲೋಮಾ ಮತ್ತು ಪಿಜಿಸಿಇಟಿ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್ ಸೋಂಕು ತಡೆಗೆ ಸರ್ಕಾರ ಹೊರಡಿಸಿರುವ ಎಲ್ಲಾ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸೂಚನೆ ನೀಡಿದರು.
ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಪ್ಲೋಮಾ ಮತ್ತು ಪಿಜಿಸಿಇಟಿ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಮಾರ್ಗ ಸೂಚಿಗಳನ್ನು ತಪ್ಪದೇ ಪಾಲಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರೀಕ್ಷಾ ಕೇಂದ್ರದ ಹೊರ ಭಾಗದಲ್ಲಿ ಹಾಗೂ ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಶಿಕ್ಷಕರು ಎಚ್ಚರವಹಿಸಬೇಕೆಂದು ತಿಳಿಸಿದರು.
ಕೋವಿಡ್ ಪಾಸಿಟಿವ್ ಬಂದ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ಕೇಂದ್ರಗಳನ್ನು ಗುರುತಿಸಬೇಕು. ಅಲ್ಲಿ ಸಿಸಿಟಿವಿ ಕ್ಯಾಮರಾವನ್ನು ಅಳವಡಿಸುವುದರ ಜೊತೆಗೆ ಜಿಲ್ಲಾ ಆರೋಗ್ಯ ಪ್ರಾಧಿಕಾರದಿಂದ ಅವಶ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಕೋವಿಡ್ ಸೋಂಕಿತ ವಿದ್ಯಾರ್ಥಿಗಳು ದೂರವಾಣಿ ಸಂಖ್ಯೆ 0820-2574802 ಹಾಗೂ ಟೋಲ್ ಫ್ರೀ ಸಂಖ್ಯೆ 1077 ಗೆ ಕರೆ ಮಾಡಿದಲ್ಲಿ ಪರೀಕ್ಷೆ ಬರೆಯಲು ಪ್ರತ್ಯೇಕ ವ್ಯವಸ್ಥೆ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಭಗವಂತಕಟ್ಟಿಮನಿ, ತಹಶೀಲ್ದಾರ ಪ್ರದೀಪ್ಎಸ್ಕುರುಡೇಕರ್, ಖಜಾನೆ ಇಲಾಖೆ ಉಪನಿರ್ದೇಶಕ ಗೋಪಾಲ ಸ್ವಾಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಬಿ ಉಪಸ್ಥಿತರಿದ್ದರು.