ನವದೆಹಲಿ: ಕರೋನಾ ವಿರುದ್ಧದ ಸಮರದಲ್ಲಿ ಮುಂಚೂಣಿಯಲ್ಲಿದ್ದು ಕೆಲಸ ಮಾಡುತ್ತಿರುವ ಡಾಕ್ಟರ್ಸ್, ಆಶಾ ಕಾರ್ಯಕರ್ತೆಯರು, ನರ್ಸ್ಗಳು ಎಲ್ಲರಿಗೂ ಪ್ರತಿಯೊಬ್ಬರಿಗೂ ತಲಾ 50 ಲಕ್ಷರೂಪಾಯಿ ಮೌಲ್ಯದ ಮೆಡಿಕಲ್ ಇನ್ಶೂರೆನ್ಸ್ ಒದಗಿಸುತ್ತಿದ್ದೇವೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಕೊರೋನಾ ಭೀತಿಯಿಂದ ದೇಶ ತತ್ತರಿಸಿ ಹೋಗಿದೆ.ಬಡವರು, ವಲಸಿಗರು, ಮಹಿಳೆಯರು ಮತ್ತು ಇತರೆ ಶ್ರಮಿಕ ವರ್ಗದವರನ್ನು, ಸೋಂಕು ನಿವಾರಣೆಗಾಗಿ ಹೋರಾಡುತ್ತಿರುವ ಕರೊನಾ ವಾರಿಯರ್ಸ್ ಅವರನ್ನೂ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ 1.70 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜನ್ನು ಘೋಷಿಸಿದೆ.
ವಿಶೇಷ ಪ್ಯಾಕೇಜ್ ಬಿಡುಗಡೆ:
ಬಡವರಿಗೆ ಗರೀಬ್ ಕಲ್ಯಾಣ್ ಅನ್ನ ಯೋಜನೆ ಘೋಷಿಸಿದ ಅವರು, 80 ಕೋಟಿ ಬಡವರು ಇದರ ಫಲಾನುಭವಿಗಳು. ಇದರಂತೆ, ಮುಂದಿನ ಮೂರು ತಿಂಗಳು ಕಾಲ ಪ್ರತಿಯೊಬ್ಬರಿಗೂ 5 ಕಿಲೋ ಅಕ್ಕಿ ಅಥವಾ 5 ಕಿಲೋ ಗೋಧಿ, ಜತೆಗೆ ಒಂದು ಕಿಲೋ ದಾಲ್ ಕೂಡ ಸಿಗಲಿದೆ ಎಂದು ಹೇಳಿದರು.
ನೇರ ನಗದು ವರ್ಗಾವಣೆ ಯೋಜನೆ ಮೂಲಕ 8.69 ಕೋಟಿ ರೈತರಿಗೆ ಏಪ್ರಿಲ್ ಮೊದಲ ವಾರದಲ್ಲಿ 2,000 ರೂಪಾಯಿಯ ಕಂತು ಪಾವತಿಯಾಗಲಿದೆ. ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆ ಪ್ರಕಾರ 5 ಕೋಟಿ ಕುಟುಂಬಗಳಿಗೆ ಪ್ರಯೋಜನವಾಗುವಂತೆ ಪ್ರತಿ ಕೆಲಸಗಾರನಿಗೆ ಹೆಚ್ಚುವರಿಯಾಗಿ 2,000 ರೂಪಾಯಿ ನೀಡಲಾಗುತ್ತದೆ ಎಂದರು.
ವಯಸ್ಸಾದವರು, ಅಂಗವಿಕಲರು, ಪಿಂಚಣಿದಾರರು ಸೇರಿ 3 ಕೋಟಿ ಜನರಿಗೆ ಹೆಚ್ಚುವರಿಯಾಗಿ ಏಕ ಕಂತಿನ ಹಣಕಾಸಿನ ನೆರವಿನ ರೂಪದಲ್ಲಿ 1,000 ರೂಪಾಯಿಯನ್ನು ಎರಡು ಕಂತುಗಳಲ್ಲಿ ನೇರ ನಗದು ಯೋಜನೆ ಮೂಲಕ ಪಾವತಿ, ಜನಧನ ಖಾತೆ ಹೊಂದಿರುವ 20 ಕೋಟಿ ಮಹಿಳೆಯರಿಗೆ ಮುಂದಿನ ಮೂರು ತಿಂಗಳ ಅವಧಿಯಲ್ಲಿ ತಲಾ 500 ರೂ,
ಉಜ್ವಲ ಸ್ಕೀಮ್ ಮೂಲಕ 8.3 ಕೋಟಿ ಬಿಪಿಎಲ್ ಕುಟುಂಬಗಳಿಗೆ ಮೂರು ತಿಂಗಳ ಮಟ್ಟಿಗೆ ಉಚಿತ ಸಿಲಿಂಡರ್, ಮಹಿಳಾ ಸ್ವಸಹಾಯ ಸಂಘಗಳಿಗೆ ಅಂದಾಜು 7 ಕೋಟಿ ಕುಟುಂಬಗಳಿಗೆ ನೆರವಾಗುವಂತೆ 20 ಲಕ್ಷ ರೂಪಾಯಿ ತನಕ ಕೊಲಾಟರಲ್ ಸಾಲ,
ಡಿಬಿಟಿ ನಗದು ವರ್ಗಾವಣೆಯ ಪ್ರಕಾರ ಕೃಷಿಕರು, ನರೇಗಾ, ಬಡ ವಿಧವೆಯರು, ಪಿಂಚಣಿದಾರರು, ಅಂಗವಿಕಲರಿಗೆ ನೆರವು ತಲುಪಲಿದೆ. ಇದೇ ರೀತಿ, ಜನ ಧನ ಖಾತೆಗೆ ಉಜ್ವಲ ಯೋಜನೆ, ಮಹಿಳಾ ಸ್ವಸಹಾಯ ಸಂಘದ ಡಿಡಿಯು ಲೈವ್ಲಿಹುಡ್ ಮಿಷನ್ಸ್, ಇಪಿಎಫ್ಒ ಅಧೀನದ ಉದ್ಯೋಗಿಗಳಿಗೆ ಸಿಗಲಿದೆ. ನಿರ್ಮಾಣ ಕಾಮಗಾರಿ ಕೆಲಸದವರು ಮತ್ತು ಜಿಲ್ಲಾ ಮಿನರಲ್ ಕೆಲಸದವರಿಗೂ ನೆರವು ನೀಡಲಾಗುವುದು ಎಂದರು.