ಉಡುಪಿ : ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡುವುದನ್ನು ನಿಯಂತ್ರಿಸುವ ಸಲುವಾಗಿ , ಜಿಲ್ಲೆಯಲ್ಲಿನ ದ.ಕನ್ನಡ ಮತ್ತು ಉ.ಕನ್ನಡ ಗಡಿಗಳಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಅವರು ಶನಿವಾರ ಉಡುಪಿ ರೈಲ್ವೆ ನಿಲ್ದಾಣದ ಬಳಿ , ಉಡುಪಿ ನಗರಸಭೆಯಿಂದ ಕೊರೋನಾ ನಿಯಂತ್ರಣ ಕುರಿತಂತೆ ಸುರಕ್ಷಿತವಾಗಿ ಕೈ ತೊಳೆಯುವ ಕುರಿತಂತೆ ಜನಜಗೃತಿ ಮೂಡಿಸಲು ಆರಂಭಿಸಿರುವ, ಸ್ಯಾನಿಟೈಸರ್ ಸಹಿತ ನಳ್ಳಿ ನೀರು ಸೌಲಭ್ಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈಗಾಗಲೇ ಕೇರಳದಿಂದ ಕೊರೋನ ಪೀಡಿತರ ಸಂಖ್ಯೆ ಹೆಚ್ಚಾಗಿರುವುದರಿಂದ, ಕೇರಳದಿಂದ ದ.ಕನ್ನಡ ಜಿಲ್ಲೆಯಲ್ಲಿ ಬರುವವರನ್ನು ಪರೀಕ್ಷಿಸಲು ಚೆಕ್ ಪೋಸ್ಟ್ ಆರಂಭಿಸಿದ್ದು , ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ಕುರಿತಂತೆ, ದ.ಕನ್ನಡ ಮತ್ತು ಉ.ಕನ್ನಡ ಗಡಿಗಳಲ್ಲಿ ಚೆಕ್ ಪೋಸ್ಟ್ ಆರಂಭಿಸಲಾಗುವುದು, ಮುಂದಿನ ಹಂತದಲ್ಲಿ ಜಿಲ್ಲೆಯ ಇತರೆ ಗಡಿಭಾಗದಲ್ಲೂ ಸಹ ಚೆಕ್ ಪೋಸ್ಟ್ ಆರಂಭಿಸಲಾಗುವುದು ಎಂದ ಜಿಲ್ಲಾಧಿಕಾರಿ ಜಿ.ಜಗದೀಶ್, ಈ ಚೆಕ್ ಪೋಸ್ಟ್ ಮೂಲಕ ಆಗಮಿಸುವವನ್ನು ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷಿಸಲಾಗುವುದು ಎಂದರು.
ಜಿಲ್ಲೆಯ ಡಿಸಿ ಮತ್ತು ಎಸಿ ಕೋರ್ಟ್ ಗಳಲ್ಲಿರುವ, ಗಂಭೀರ ಮತ್ತು ತುರ್ತು ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಲು ಕ್ರಮ ಕೈಗೊಂಡಿದ್ದು, ಈ ಕುರಿತಂತೆ ಕುಂದಾಪುರ ಎಸಿ ಅವರಿಗೂ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.