ಬೆಂಗಳೂರು: ರಾಜ್ಯದ ಹೊಸ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. 83 ದಿನಗಳ ಬಳಿಕ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ 4 ಸಾವಿರದೊಳಗೆ ಹೊಸ ಪ್ರಕರಣ ವರದಿಯಾಗಿದೆ.
ಮಂಗಳವಾರ ರಾಜ್ಯದಲ್ಲಿ 3,709 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 139 ಮಂದಿ ಸಾವನ್ನಪ್ಪಿದ್ದಾರೆ. 8,111 ಮಂದಿ ಗುಣಮುಖರಾಗಿದ್ದಾರೆ.
ಮಾರ್ಚ್ 30 ರಂದು ಶೇ.2.78 ಪಾಸಿಟಿಟಿ ದರದಲ್ಲಿ 2,975 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಇದಾದ 83 ದಿನಗಳ ಬಳಿಕ ಮೊದಲ ಬಾರಿಗೆ 4 ಸಾವಿರದೊಳಗೆ ಹೊಸ ಕೇಸ್ ಪತ್ತೆಯಾಗಿವೆ. ಈ ನಡುವೆ ರಾಜ್ಯದಲ್ಲಿ ಒಂದೇ ದಿನ 1.29 ಲಕ್ಷ ಕೋವಿಡ್ ಪರೀಕ್ಷೆ ನಡೆದಿದ್ದು, ಶೇ.2.87 ಪಾಸಿಟಿವಿಟಿ ದರ ದಾಖಲಾಗಿದೆ.
ಇನ್ನು ಬೆಂಗಳೂರು ನಗರದಲ್ಲಿ 803 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 26 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದ 7 ಜಿಲ್ಲೆಗಳಲ್ಲಿ ಯಾವುದೇ ಕೋವಿಡ್’ನಿಂದ ಸಾವುಗಳು ವರದಿಯಾಗಿಲ್ಲ.
ರಾಜ್ಯದ ಮರಣ ದರ ಶೇ.1.21ಕ್ಕೆ ಏರಿಕೆಯಾಗಿದ್ದು, ಈ ವರೆಗೂ ಒಟ್ಟು 28.15 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 26,62 ಲಕ್ಷ ಮಂದಿ ಗುಣಮುಖರಾಗಿದ್ದಾರೆ. 34,164 ಮಂದಿ ಮೃತರಾಗಿದ್ದಾರೆ. ಒಟ್ಟು 3.30 ಕೋಟಿ ಕೋವಿಡ್ ಪರೀಕ್ಷೆಗಳು ನಡೆದಿದೆ.