ಕೊರೊನಾ ಹಿನ್ನೆಲೆ ಜನವರಿ 2021 ಕ್ಕೆ ಸೇನಾ ನೇಮಕಾತಿ ರ್ಯಾಲಿ ಮುಂದೂಡಿಕೆ: ಕರ್ನಲ್ ಎಫ್.ಪಿ. ದುಬಾಶ್

ಉಡುಪಿ ಮಾ.16: ಕೊರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಮುಂಜಾಗೃತ ಕ್ರಮವಾಗಿ ಸರಕಾರದ ಆದೇಶದಂತೆ ಉಡುಪಿ ಜಿಲ್ಲೆಯಲ್ಲಿ ಎಪ್ರಿಲ್ 4 ರಿಂದ 14 ರ ವರೆಗೆ ಹಮ್ಮಿಕೊಳ್ಳಲಾಗಿದ್ದ ಸೇನಾ ನೇಮಕಾತಿ ರ್ಯಾಲಿಯನ್ನು ರದ್ದುಗೊಳಿಸಿ, ಜನವರಿ 2021 ಕ್ಕೆ ಮುಂದೂಡಲಾಗಿದೆ. ಈಗಾಗಲೇ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಅರ್ಜಿಯನ್ನು ಜನವರಿ 2021 ರ ಸೇನಾ ರ್ಯಾಲಿಯಲ್ಲಿ ಪರಿಗಣಿಸಲಾಗುತ್ತದೆ ಹಾಗೂ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಯ ಅರ್ಹತಾ ಮಾನದಂಡಗಳಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ, ಅಭ್ಯರ್ಥಿಗಳಲ್ಲಿ ಯಾವುದೇ ಗೊಂದಲ ಬೇಡ ಎಂದು ಮಂಗಳೂರು ಸೇನಾ ನೇಮಕಾತಿಯ ನಿರ್ದೇಶಕ ಕರ್ನಲ್ ಎಫ್.ಪಿ ದುಬಾಶ್ ಮಾಹಿತಿ ನೀಡಿದರು.

ಅವರು ಸೋಮವಾರ ಡಾ. ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ  ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ, ಜಿಲ್ಲಾಡಳಿತ ಮತ್ತು ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಸೇನಾ ನೇಮಕಾತಿ ರ್ಯಾಲಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ಸೇನಾ ರ್ಯಾಲಿಯಲ್ಲಿ ಒಟ್ಟು 11 ಜಿಲ್ಲೆಗಳಿಂದ ಕನಿಷ್ಠ 30 ರಿಂದ 35 ಸಾವಿರ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ಸರಕಾರದ ಆದೇಶದಿಂದಾಗಿ ಎಪ್ರಿಲ್‍ನಲ್ಲಿ ಆಯೋಜಿಸಲಾಗಿದ್ದ ಸೇನಾ ನೇಮಕಾತಿ ರ್ಯಾಲಿಯನ್ನು ಸದ್ಯದ ಪರಿಸ್ಥಿತಿ ಹಿನ್ನಲೆ ರದ್ದು ಗೊಳಿಸಲಾಗಿದೆ ಎಂದು ಹೇಳಿದರು.

ಸೇನಾ ನೇಮಕಾತಿ ರ್ಯಾಲಿ ಆಯ್ಕೆ ಪ್ರಕ್ರಿಯೆ:

ಮೇ ತಿಂಗಳಿನಲ್ಲಿ ಕಣ್ಣೂರು, ಸೆಪ್ಟೆಂಬರ್‍ನಲ್ಲಿ ಬೆಂಗಳೂರು, ಅಕ್ಟೋಬರ್ ಅಥವಾ ನವೆಂಬರ್‍ನಲ್ಲಿ ತ್ರಿವೆಂಡ್ರಮ್‍ನಲ್ಲಿ ಸೇನಾ ನೇಮಕಾತಿ ರ್ಯಾಲಿಯನ್ನು ಆಯೋಜಿಸಲಾಗುತ್ತಿದ್ದು, ಸೇನಾ ನೇಮಕಾತಿ ರ್ಯಾಲಿ ಆಯ್ಕೆ ಪ್ರಕ್ರಿಯೆಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದ ಅವರು, ಸೇನಾ ರ್ಯಾಲಿಯಲ್ಲಿ ವಯೋಮಿತಿ 17 ರಿಂದ 23 ವರ್ಷ ಒಳಗಿನ ಅವಿವಾಹಿತ ಯುವಕರಿಗೆ ಸೋಲ್ಜರ್ ಜನರಲ್ ಡ್ಯೂಟಿ (ಆಲ್‍ಆಮ್ರ್ಸ್), ಸೋಲ್ಜರ್ ಟೆಕ್ನಿಕಲ್, ಸೋಲ್ಜರ್ ಟೆಕ್ ನರ್ಸಿಂಗ್ ಅಸಿಸ್ಟೆಂಟ್/ ಸೋಲ್ಜರ್ ನರ್ಸಿಂಗ್ ಸಹಾಯಕ, ಸೋಲ್ಜರ್ ಕ್ಲರ್ಕ್, ಸ್ಟೋರ್ ಕೀಪರ್ ಟೆಕ್ನಿಕಲ್ (ಆಲ್‍ಆಮ್ರ್ಸ್), 10 ನೇ ತರಗತಿ ಪಾಸ್ ಆದವರಿಗೆ ಸೋಲ್ಜರ್ ಟ್ರೇಡ್ಸ್ಮನ್ (ಆಲ್‍ಆಮ್ರ್ಸ್) ಮತ್ತು 8 ನೇ ತರಗತಿ ಪಾಸ್ ಆದವರಿಗೆ ಸೋಲ್ಜರ್ ಟೇಡ್ನ್ಮನ್ (ಆಲ್‍ಆಮ್ರ್ಸ್) ಹುದ್ದೆಗಳು ಲಭ್ಯವಿದೆ. ರ್ಯಾಲಿ ಮುಂದೂಡಿರುವುದರಿಂದಾಗಿ ಅಭ್ಯಾಸ ನಡೆಸಲು ಹೆಚ್ಚಿನ ಅವಕಾಶ ಸಿಕ್ಕಿದ್ದು, ಇಂದಿನಿಂದಲೇ ರ್ಯಾಲಿಗೆ ಪೂರಕವಾದ ಅಭ್ಯಾಸಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದರು. ಸೇನಾ ರ್ಯಾಲಿಯಲ್ಲಿ ಪ್ರಮುಖವಾಗಿ ಅಭ್ಯರ್ಥಿಯು 1600 ಮೀಟರ್‍ನ್ನು 5 ನಿಮಿಷ 30 ಸೆಕೆಂಡ್‍ನಿಂದ 5 ನಿಮಿಷ 45 ಸೆಕೆಂಡ್ಸ್‍ನಲ್ಲಿ ಮುಗಿಸಬೇಕಾಗಿದ್ದು, ಈ ಪರೀಕ್ಷೆ ಪಾಸಾದವರು ಮಾತ್ರ ಕ್ರಮವಾಗಿ 60 ಹಾಗೂ 48 ಅಂಕಗಳನ್ನು ಪಡೆದು ಮುಂದಿನ ಸುತ್ತಿಗೆ ಅರ್ಹತೆ ಪಡೆಯುತ್ತಾರೆ ಹಾಗೂ ಹೆಚ್ಚುವರಿ ಬೋನಸ್ ಅಂಕವಾಗಿ ರ್ಯಾಲಿ ನಡೆಯುವ ಕಳೆದ 2 ವರ್ಷಗಳಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಕನಿಷ್ಠ ರಾಜ್ಯ ಮಟ್ಟದಲ್ಲಿ ಪ್ರಥಮ ಅಥವಾ ದ್ವಿತೀಯ ಸ್ಥಾನ ಗಳಿಸಿದ ಹಾಗೂ ಎನ್‍ಸಿಸಿ ಸರ್ಟಿಫಿಕೇಟ್ ಪಡೆದ ಅಭ್ಯರ್ಥಿಗಳು ದಾಖಲೆಯನ್ನು ಪರಿಗಣಿಸಲಾಗುತ್ತಿದ್ದು, ಅಭ್ಯರ್ಥಿಗಳು ಪರೀಕ್ಷಾ ವೇಳೆ ಸೂಕ್ತ ದಾಖಲೆ ಪ್ರದರ್ಶಿಸುವಂತೆ ತಿಳಿಸಿದರು.

ರ್ಯಾಲಿಯಲ್ಲಿ ಭಾಗವಹಿಸಲು ಅಡ್ಮಿಟ್ ಕಾರ್ಡ್ ಕಡ್ಡಾಯವಾಗಿದ್ದು, ಮುಂದಿನ ದಿನಗಳಲ್ಲಿ ಇ-ಮೈಲ್ ಮೂಲಕ ಅಡ್ಮಿಟ್ ಕಾರ್ಡ್‍ನ್ನು ಎಲ್ಲಾ ಅಭ್ಯರ್ಥಿಗಳಿಗೆ ಕಳುಹಿಸಲಾಗುವುದು. ಹೆಚ್ಚಿನ ಮಾಹಿತಿಗೆ ಆನ್‍ಲೈನ್ www.joinindianarmy.nic.in ನ್ನು ಅಥವಾ ಮಂಗಳೂರಿನ ಕೂಳೂರಿನಲ್ಲಿರುವ ಸೇನಾ ನೇಮಕಾತಿ ಕಚೇರಿಯನ್ನು ಸಂಪರ್ಕಿಸುವಂತೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ಡಾ.ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಹಾಗೂ ಸ್ನಾತಕೋತ್ತರ ಪದವಿ ಕಾಲೇಜಿನ ಮುಖ್ಯೋಪಾಧ್ಯಾಯ ಡಾ. ಭಾಸ್ಕರ್ ಶೆಟ್ಟಿ, ಕಾಲೇಜಿನ ಪ್ರೊ.ಉಮೇಶ್ ಮಯ್ಯ ಉಪಸ್ಥಿತರಿದ್ದರು.

ಕಾಲೇಜಿನ ಉಪನ್ಯಾಸಕ ರಾಜೇಂದ್ರ ಸ್ವಾಗತಿಸಿದರು. ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ವಂದಿಸಿದರು.