ಉಡುಪಿ: ಇಡೀ ಜಗತ್ತನ್ನೇ ಆತಂಕಕ್ಕೆ ದೂಡಿರುವ ಕೊರೊನಾ ವೈರಸ್ ಇದೀಗ ಉಡುಪಿಯಲ್ಲೂ ಭೀತಿ ಸೃಷ್ಟಿಸಲು ಸಜ್ಜಾಗಿದೆಯೇ ಎಂಬ ಅನುಮಾನ ಮೂಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇಂದು ಕಳೆದ 15 ಹಿಂದೆ ಚೀನಾ ಪ್ರವಾಸ ಕೈಗೊಂಡು ಸ್ವದೇಶಕ್ಕೆ ಮರಳಿರುವ ಜಿಲ್ಲೆಯ ನಾಲ್ಕು ಮಂದಿ ಶೀತ ಜ್ವರದಿಂದ ಬಳಲುತ್ತಿದ್ದು, ಅವರನ್ನು ಸಂಶಯಾಸ್ಪದ ಕೊರೊನಾ ವೈರಸ್ ಪರೀಕ್ಷೆಗೊಳಪಡಿಸಿ ಜಿಲ್ಲಾಸ್ಪತ್ರೆಯ ಪ್ರತ್ಯೇಕ ವಾರ್ಡಿನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಈ ನಾಲ್ಕು ಮಂದಿರ ಪೈಕಿ ಒಬ್ಬರು ಕಾಪು ತಾಲೂಕಿನವರಾಗಿದ್ದು 15 ದಿನಗಳ ಹಿಂದೆ ಚೀನಾದಿಂದ ಊರಿಗೆ ಮರಳಿದ್ದರು. ಇದೀಗ ಅವರು ನೆಗಡಿ, ಗಂಟಲು ಸೋಂಕಿನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಉಳಿದ ಮೂವರು ಬ್ರಹ್ಮಾವರ ತಾಲ್ಲೂಕಿನ ಗಂಡ ಹೆಂಡತಿ ಹಾಗೂ ಅವರ ಮಗು. ಇವರು ಕೂಡ ಎರಡು ವಾರಗಳ ಹಿಂದೆ ಚೀನದಿಂದ ಬಂದಿದ್ದರು. ಇವರಲ್ಲಿ ಗಂಡನಲ್ಲಿ ಶೀತ, ಕೆಮ್ಮು, ಜ್ವರದ ಲಕ್ಷಣ ಕಂಡುಬಂದಿದ್ದು, ಮಗುವಿಗೆ ಸ್ವಲ್ಪ ಶೀತವಾಗಿದೆ. ಆದರೆ ಹೆಂಡತಿಯಲ್ಲಿ ಯಾವುದೇ ಜ್ವರದ ಲಕ್ಷಣ ಕಾಣಿಸಿಕೊಂಡಿಲ್ಲ. ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರತ್ಯೇಕ ವಾರ್ಡ್ ನಲ್ಲಿ ಚಿಕಿತ್ಸೆ:
ಕೊರೆನಾ ಸೋಂಕು ತಗುಲಿರಬಹುದೆಂಬ ಸಂಶಯದ ಹಿನ್ನೆಲೆಯಲ್ಲಿ ಈ ನಾಲ್ವರನ್ನು ಪ್ರತ್ಯೇಕ ವಾರ್ಡಿನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ರಕ್ತ ಹಾಗೂ ಗಂಟಲಿನ ದ್ರವವನ್ನು ಕೊರೊನಾ ವೈರಸ್ ಪರೀಕ್ಷೆಗಾಗಿ ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಅಧಿಕೃತ ಮೂಲಗಳಿಂದ ಮಾಹಿತಿ ಲಭಿಸಿದೆ.
ಕೊರೊನಾ ವೈರಸ್ ತಗುಲಿರುವ ಸಾಧ್ಯತೆ ಕಡಿಮೆ:
ಈ ನಾಲ್ವರಿಗೆ ಕೊರೆನಾ ಸೋಂಕು ತಗುಲಿರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಇದನ್ನು ಕೆಲ ಬಲ್ಲ ವೈದ್ಯ ಮೂಲಗಳು ಖಚಿತಪಡಿಸಿವೆ. ಇದು ಸಾಮಾನ್ಯ ಶೀತ ಕೆಮ್ಮು ಆಗಿರುವ ಸಾಧ್ಯತೆ ಇದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ತೀವ್ರ ನಿಗಾದಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿವೆ.












