ಚಿಕ್ಕಮಗಳೂರು: ಮಲೆನಾಡಿನ ಜನರ ಸಂಪರ್ಕ ಕೊಂಡಿಯಾಗಿದ್ದ ಸಹಕಾರ ಸಾರಿಗೆ ಸಂಸ್ಥೆಗೆ ಬೀಗ ಬಿದ್ದಿದ್ದು, ಹೀಗಾಗಿ ಸಹಕಾರ ಸಾರಿಗೆ ತನ್ನ ಸಂಚಾರವನ್ನು ಶಾಶ್ವತವಾಗಿ ನಿಲ್ಲಿಸಿದೆ. ಜಿಲ್ಲಾಧಿಕಾರಿಯವರ ಆದೇಶದಂತೆ ಸಂಸ್ಥೆಗೆ ಬೀಗ ಹಾಕಲಾಗಿದೆ.
ಕಾರಣ ಏನು?.
ಶ್ರೀರಾಮ್ ಟ್ರಾನ್ಸ್ ಪೋರ್ಟ್ ನಿಂದ ಸಹಕಾರ ಸಾರಿಗೆ ₹1.10 ಕೋಟಿ ಸಾಲ ಪಡೆದುಕೊಂಡಿತ್ತು. ಆದರೆ 72 ಬಸ್ ಗಳನ್ನು ಹೊಂದಿದ್ದ ಸಹಕಾರ ಸಾರಿಗೆ ಸಂಸ್ಥೆ ನಷ್ಟಕ್ಕೆ ಸಿಲುಕಿತ್ತು. ಬಡ್ಡಿ ಸೇರಿ ₹1.31ಕೋಟಿ ಹಣವನ್ನು ಶ್ರೀರಾಮ್ ಸಂಸ್ಥೆಗೆ ಕಟ್ಟಬೇಕಿತ್ತು. ಆದರೆ ಸಹಕಾರ ಸಾರಿಗೆ ಸಂಸ್ಥೆಗೆ ಈ ಸಾಲ ಮರು ಪಾವತಿಸಲು ಸಾಧ್ಯವಾಗಿಲ್ಲ.
ಒಂದು ವರ್ಷದಿಂದ ಸಾಲ ಕಟ್ಟದ ಹಿನ್ನೆಲೆಯಲ್ಲಿ ಶ್ರೀರಾಮ್ ಟ್ರಾನ್ಸ್ ಪೋರ್ಟ್ ಜಿಲ್ಲಾಧಿಕಾರಿ ಮೊರೆ ಹೋಗಿತ್ತು. ಇದೀಗ ಜಿಲ್ಲಾಧಿಕಾರಿ ರಮೇಶ್ ಅವರ ಆದೇಶದ ಮೇರೆಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಜಪ್ತಿ ಮಾಡಲಾಗಿದೆ.
72 ಬಸ್ ಗಳು, 200 ಕ್ಕೂ ಹೆಚ್ಚು ಕಾರ್ಮಿಕರನ್ನು ಹೊಂದಿದ್ದ ಟಿಸಿಎಸ್ ಸಂಸ್ಥೆಗೆ ಇಂದು ಬೀಗ ಹಾಕಲಾಗಿದೆ. ಆ ಮೂಲಕ ಚಿಕ್ಕಮಗಳೂರಿನ ಕೊಪ್ಪದ ಸಹಕಾರ ಸಾರಿಗೆ ಸಂಸ್ಥೆ ಇತಿಹಾಸದ ಪುಟ ಸೇರಿದೆ.