ಉಡುಪಿ: ಗ್ರಾಮೀಣ ಪ್ರದೇಶದ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ಶಕ್ತಿ ತುಂಬುವ ಉದ್ದೇಶದಿಂದ ಸಾಮಾಜಿಕ ಕಳಕಳಿಯ ಚಿಂತನೆ ಇಟ್ಟುಕೊಂಡು ಸಹಕಾರಿ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಕಾರ್ಯನಿರ್ವಹಿಸುತ್ತಿದೆ. ಇದು ಸಹಕಾರಿ ಸಂಸ್ಥೆಯ ಪ್ರಗತಿಗೆ ಪೂರಕವಾಗಿದೆ ಎಂದು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಉಡುಪಿ ಜಿಲ್ಲಾ ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಬುಧವಾರ ಉಡುಪಿ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಉಡುಪಿ ಜಿಲ್ಲೆಯ ಮೂರ್ತೆದಾರರ ಸಹಕಾರಿ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ಆಯೋಜಿಸಿದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲೆಯಲ್ಲಿ ಜನರು ನಾಲ್ಕು ಸಾವಿರದ ಐನ್ನೂರು ಕೋಟಿ ರೂ.ಗಳನ್ನು ಸಹಕಾರಿ ಸಂಸ್ಥೆಗಳಲ್ಲಿ ಠೇವಣಿ ಇರಿಸಿದ್ದಾರೆ. ಜನರು ಸಹಕಾರಿ ಸಂಸ್ಥೆಯ ಮೇಲೆ ಇಟ್ಟಿರುವ ವಿಶ್ವಾಸ, ನಂಬಿಕೆಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು. ಆಗ ಉತ್ತಮ ರೀತಿಯಲ್ಲಿ ಸಹಕಾರಿ ಕ್ಷೇತ್ರದ ಅಭಿವೃದ್ಧಿ ಆಗುತ್ತದೆ ಎಂದರು.
ಕರಾವಳಿ ಭಾಗದಲ್ಲಿ ಸಹಕಾರಿ ಕ್ಷೇತ್ರ ಬ್ಯಾಂಕಿಂಗ್ ವ್ಯವಹಾರಕ್ಕೆ ಮಾತ್ರ ತನ್ನ ಕಾರ್ಯವ್ಯಾಪ್ತಿಯನ್ನು ಸೀಮಿತಗೊಳಿಸಿದೆ. ಆದರೆ, ರಾಜ್ಯ ಬೇರೆ ಜಿಲ್ಲೆಗಳಲ್ಲಿ ಹಾಗೂ ಬೇರೆ ರಾಜ್ಯಗಳಲ್ಲಿ ವ್ಯವಹಾರಿಕವಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದೆ. ಇಂತಹ ಬದಲಾವಣೆಗಳು ನಮ್ಮಲ್ಲಿಯೂ ಆಗಬೇಕು ಎಂದು ಹೇಳಿದರು.
ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಹರೀಶ್ ಕಿಣಿ ಅಲೆವೂರು, ವೈ. ಸುಧೀರ್ ಕುಮಾರ್, ಮೂರ್ತೆದಾರರ ಜಿಲ್ಲಾ ಮಹಾಮಂಡಳದ ಉಪಾಧ್ಯಕ್ಷ ವಿಠಲ ಪೂಜಾರಿ, ಪ್ರಾಧ್ಯಾಪಕ ಸಂತೋಷ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಾಹಕಿ ಅನುಷಾ ಕೋಟ್ಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.


















