ನವದೆಹಲಿ: ಸಬ್ಸಿಡಿ ರಹಿತ ಅಡುಗೆ ಅನಿಲ ಗ್ರಾಹಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಪ್ರತಿ ಸಿಲಿಂಡರ್ ಗೆ 62.5 ರೂಪಾಯಿಯನ್ನು ಇಳಿಸಿದೆ. ಆ ಮೂಲಕ ಗ್ರಾಹಕರ ಹೊರೆ ತಗ್ಗಿಸಿದ್ದು, ದರ ಇಳಿಕೆಯಿಂದ ಪ್ರತಿ ಸಿಲಿಂಡರ್ ನ ಬೆಲೆಯು 574.50 ರೂಪಾಯಿಗೆ ಇಳಿದಿದೆ.
ಗುರುವಾರದಿಂದಲೇ ನೂತನ ದರವು ಜಾರಿಗೆ ಬಂದಿದ್ದು, ಸಬ್ಸಿಡಿ ರಹಿತ ಗ್ರಾಹಕರು 14.2 ಕಿಲೋಗ್ರಾಂನ ಗರಿಷ್ಠ 12 ಗ್ಯಾಸ್ ಸಿಲಿಂಡರ್ ಪಡೆಯುವ ಸೌಲಭ್ಯವಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನದ ಬೆಲೆಯು ಕುಸಿದ ಕಾರಣದಿಂದಾಗಿ ಭಾರತದಲ್ಲಿ ಅಡುಗೆ ಅನಿಲ ಬೆಲೆಯು ಕಡಿಮೆಯಾಗಿದೆ. ಹೀಗಾಗಿ ನೂತನ ದರದಿಂದ ಅನುಕೂಲವಾಗಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಂಸ್ಥೆಯು ಮಾಹಿತಿ ನೀಡಿದೆ.
ಕಳೆದ ಕೆಲವು ತಿಂಗಳುಗಳಿಂದ ಅಡುಗೆ ಅನಿಲ ಸಿಲಿಂಡರ್ ಬೆಲೆ ಕುಸಿಯುತ್ತಿದ್ದು, ಕಳೆದ ಜುಲೈನಲ್ಲಿ 100.50 ರೂಪಾಯಿ ಇಳಿಕೆಯಾಗಿತ್ತು. ಈಗ ಮತ್ತೆ ದರ ಇಳಿಕೆಯಾದ ಕಾರಣ ಕಳೆದ ಎರಡು ತಿಂಗಳಲ್ಲಿ ಒಟ್ಟು 163 ರೂಪಾಯಿ ಕಡಿಮೆಯಾಗಿದೆ.