ಉಡುಪಿ: ಕಾಂಗ್ರೆಸ್ ನ ಸೈದ್ಧಾಂತಿಕ ನಿಲುವು, ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿಯ ಉಪಾಧ್ಯಕ್ಷ ಕಿಮ್ಮನೆ ರತ್ನಾಕರ ಹೇಳಿದರು.
ನಗರದ ಪುರಭವನದಲ್ಲಿ ನಡೆದ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಸಿದ್ಧಾಂತ ಜನರಿಗೆ ಸಂಪೂರ್ಣವಾಗಿ ತಲುಪಿಲ್ಲ. ಬಿಜೆಪಿಯ ಆಡಳಿತ ವೈಫಲ್ಯದಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಯಶಸ್ಸು ಕಂಡಿದೆ. ಆದರೆ, ಅದನ್ನು ಕಾಯಂ ಸ್ಥಿತಿ ಅಂದುಕೊಳ್ಳುವ ಹಾಗಿಲ್ಲ. ಆದ್ದರಿಂದ ಕಾಂಗ್ರೆಸ್ ಹಾಗೂ ಬಿಜೆಪಿಗೆ ಇರುವ ಭಿನ್ನಾಭಿಪ್ರಾಯ ಮತ್ತು ಸೈದ್ಧಾಂತಿಕ ನಿಲುವು ಏನು ಎಂಬುವುದನ್ನು ಜನರಿಗೆ ತಿಳಿಸುವ ಕಾರ್ಯ ಆಗಬೇಕು ಎಂದು ಕರೆ ನೀಡಿದರು.
ಸೈದ್ಧಾಂತಿಕ ಬದ್ಧತೆ ಇರುವ ನಾಯಕ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿರುವುದು ದೇಶದ ಅದೃಷ್ಟ. ಅವರ ಅಭಿವೃದ್ದಿಯ ದೃಷ್ಟಿಕೋನ ಹಾಗೂ ವ್ಯವಸ್ಥೆಯನ್ನು ಸರಿಪಡಿಸುವ ಯೋಚನೆ ಸ್ಪಷ್ಟವಾಗಿದೆ ಎಂದರು.
ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರಿಶ್ ಕಿಣಿ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಕೆಪಿಸಿಸಿ ವಕ್ತಾರ ಮುನೀರ್ ಜನ್ಸಾಲೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು, ಮುಖಂಡರಾದ ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್, ಕಿಶನ್ ಹೆಗ್ಡೆ ಕೊಳ್ಳೆಬೈಲ್, ದಿನೇಶ್ ಪುತ್ರನ್, ದಿವಾಕರ ಕುಂದರ್ ಮೊದಲಾದವರು ಇದ್ದರು.












