ಬನ್ನಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಅಗೆದಿರುವ ವಿವಾದ; ನಗರಸಭೆ ಸಾಮಾನ್ಯ ಸಭೆಯಲ್ಲಿ ಭಾರೀ ಗದ್ದಲ

ಉಡುಪಿ: ನಗರದ ಬನ್ನಂಜೆ ರಾಷ್ಟ್ರೀಯ ಹೆದ್ದಾರಿ 169 (ಎ) ರಲ್ಲಿ ಯೂಟರ್ನ್ ವಿಸ್ತಾರಗೊಳಿಸಲು ಡಿವೈಡರ್ ಅಗೆದಿರುವ ವಿಚಾರದ ಬಗ್ಗೆ ಇಂದು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಭಾರೀ ಗದ್ದಲ ಸೃಷ್ಟಿಯಾಗಿ ಕೋಲಾಹಲ ಉಂಟಾಯಿತು.
ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಸದಸ್ಯ ಟಿ.ಜಿ. ಹೆಗ್ಡೆ ಅವರು, ಬನ್ನಂಜೆ ಬಳಿ ಡಿವೈಡರ್ ಅಗೆದು ವಿಸ್ತಾರಗೊಳಿಸುವ ವಿಚಾರದಲ್ಲಿ ನಗರಸಭೆಯ ಮೇಲೆ ಭ್ರಷ್ಟಾಚಾರದ ಆರೋಪ‌ ಬಂದಿದೆ.

ಈ ಕುರಿತು ವೆಬ್ ಸೈಟ್ ನ್ಯೂಸ್, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೀಗಾಗಿ ಇದರಲ್ಲಿ ನಗರಸಭೆಯ ಪಾತ್ರ ಇದೆಯಾ? ಜನಪ್ರತಿನಿಧಿಗಳ ಪಾತ್ರ ಇದೆಯಾ? ಡಿವೈಡರ್ ಅಗೆಯಲು ಪರ್ಮಿಷನ್ ಇತ್ತಾ? ಒಡೆದು ಹಾಕಲು ಕಾರಣ ಏನು ಎಂಬುವುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯೆ ಸವಿತಾ ಹರೀಶ್ ರಾಮ್ ಅವರು, ನಗರಸಭೆಯ ನಾಮನಿರ್ದೇಶಿತ ಸದಸ್ಯ ಸುರೇಶ್ ಶೆಟ್ಟಿ ಬನ್ನಂಜೆ ಅವರು ನಗರಸಭೆಯ ಮೇಲೆ ಭ್ರಷ್ಟಾಚಾರ ಆರೋಪ ಹೊರೆಸಿದ್ದಾರೆ. ಅವರು ಕೂಡಲೇ ಸಭೆಯ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಎದ್ದು ನಿಂತು ಮಾತನಾಡಿದ ನಾಮನಿರ್ದೇಶಿತ ಸದಸ್ಯ ಸುರೇಶ್ ಶೆಟ್ಟಿ ಬನ್ನಂಜೆ ಅವರು, ನಾನು ಯಾವುದೇ ಗೋಣಿ ಚೀಲದ ಆರೋಪ ಮಾಡಿಲ್ಲ‌. ನಾನು ಯಾಕೆ ಕ್ಷಮೆ ಕೇಳಬೇಕು ಎಂದು ಉತ್ತರಿಸಿದರು.

ಇದರಿಂದ ಕೆಂಡಾಮಂಡಲರಾದ ಆಡಳಿತ ಪಕ್ಷದ ಸದಸ್ಯರು ವಾಗ್ವಾದ ನಡೆಸಿದರು. ಬಳಿಕ ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯೆ ಪರಸ್ಪರ ಮಾತಿನಚಕಮಕಿ ಉಂಟಾಯಿತು.
ಆಡಳಿತ ಪಕ್ಷದ ಸದಸ್ಯರು ಸದನದ ಬಾವಿಗಿಳಿದು ಕ್ಷಮೆಯಾಚನೆಗೆ ಪಟ್ಟು ಹಿಡಿದರು.

ಈ ವೇಳೆ ನಾಮನಿರ್ದೇಶಿತ ಸದಸ್ಯರ ಪರವಾಗಿ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್ ಕ್ಷಮೆಯಾಚನೆ ನಡೆಸಿದರು. ಇದರಿಂದ ಸಮಾಧಾನಗೊಳ್ಳದ ಆಡಳಿತ ಪಕ್ಷದ ಸದಸ್ಯರು ಸುರೇಶ್ ಶೆಟ್ಟಿ ಅವರೇ ಕ್ಷಮೆಯಾಚನೆ ನಡೆಸಬೇಕು ಎಂದು‌ ಪಟ್ಟುಹಿಡಿದರು. ಇದನ್ನು ವಿರೋಧಿಸಿದ ವಿಪಕ್ಷ ಸದಸ್ಯರು ಸಭಾತ್ಯಾಗ ನಡೆಸಿದರು. ಹಿರಿಯ ಸದಸ್ಯೆ ಸುಮಿತ್ರಾ ನಾಯಕ್ ಅವರನ್ನು ಕಳುಹಿಸಿ ವಿಪಕ್ಷ ಸದಸ್ಯರ ಮನವೊಲಿಸಿ ಮತ್ತೆ ಅವರನ್ನು ಸಭೆಗೆ ಕರೆಸಲಾಯಿತು.