ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ: ನಟ ಕಮಲ್ ಹಾಸನ್’ಗೆ ಜೀವ ಬೆದರಿಕೆ; ದೂರು ದಾಖಲು

ಚೆನ್ನೈ: ಸನಾತನ ಧರ್ಮದ ವಿರುದ್ಧ ಮಾತನಾಡಿದಕ್ಕೆ ನಟ ಕಮಲ್ ಹಾಸನ್’ಗೆ ಜೀವ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆಯ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಕ್ಕಳ್ ನೀಧಿ ಮೈಯಂ ಪದಾಧಿಕಾರಿಗಳು ಚೆನ್ನೈ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ನಟ ಸೂರ್ಯ ಅವರ ದತ್ತಿ ಸಂಸ್ಥೆ ಅಗರಂ ಫೌಂಡೇಶನ್‌ನ 15ನೇ ವಾರ್ಷಿಕೋತ್ಸವದ ಆಚರಣೆಯಲ್ಲಿ ಕಮಲ್ ನೀಡಿದ ಕೆಲವು ಹೇಳಿಕೆಗಳು ವಿವಾದಾತ್ಮಕವಾಗಿವೆ. ನೀಟ್ ಪರೀಕ್ಷೆಯನ್ನು ಟೀಕಿಸಿದ ಕಮಲ್ ಹಾಸನ್, ಈ ಯುದ್ಧದಲ್ಲಿ, ಶಿಕ್ಷಣಕ್ಕೆ ಮಾತ್ರ ದೇಶವನ್ನು ಬದಲಾಯಿಸುವ ಶಕ್ತಿ ಇದೆ. ದಬ್ಬಾಳಿಕೆ ಮತ್ತು ಸನಾತನದ ಸರಪಳಿಗಳನ್ನು ಮುರಿಯುವ ಏಕೈಕ ಅಸ್ತ್ರ ಶಿಕ್ಷಣ. ಶಿಕ್ಷಣವನ್ನು ಹೊರತುಪಡಿಸಿ ಬೇರೆ ಯಾವುದೇ ಆಯುಧವನ್ನು ನೀವು ತೆಗೆದುಕೊಳ್ಳಬಾರದು ಮತ್ತು ಅಜ್ಞಾನಿ ಬಹುಸಂಖ್ಯಾತರು ನಿಮ್ಮನ್ನು ಸೋಲಿಸುತ್ತಾರೆ ಎಂದು ಕಮಲ್​ ಹಾಸನ್​ ಹೇಳಿದರು.

ಈ ಹೇಳಿಕೆಗೆ ನಟ ರವಿಚಂದ್ರನ್ ಯೂಟ್ಯೂಬ್ ಸಂದರ್ಶನದಲ್ಲಿ ಆಕ್ರೋಶ ಹೊರಹಾಕಿದರು. ಕಮಲ್ ಅವರ ಹೇಳಿಕೆ ಸನಾತನ ಧರ್ಮಕ್ಕೆ ಮಾಡಿದ ಅವಮಾನ ಎಂದು ರವಿಚಂದ್ರನ್ ಹೇಳಿದರು. ಅಲ್ಲದೆ, ಜೀವ ಬೆದರಿಕೆ ಸಹ ಹಾಕಿದರು.

ಕಮಲ್ ಹಾಸನ್ ಚಲನಚಿತ್ರ ಬಹಿಷ್ಕರಿಸುವಂತೆ ಕರೆ:
ಈ ವಿವಾದದ ಬೆನ್ನಲ್ಲಿ ತಮಿಳುನಾಡು ಬಿಜೆಪಿ ರಾಜ್ಯ ಕಾರ್ಯದರ್ಶಿ ಅಮರ್ ಪ್ರಸಾದ್ ರೆಡ್ಡಿ ಅವರು ಕಮಲ್ ಹಾಸನ್ ಅವರ ಎಲ್ಲ ಚಲನಚಿತ್ರಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದರು. ಸಾರ್ವಜನಿಕರು ಚಿತ್ರಮಂದಿರಗಳಲ್ಲಿ ಅಥವಾ ಒಟಿಟಿ ವೇದಿಕೆಗಳಲ್ಲಿ ಕಮಲ್​ ಸಿನಿಮಾಗಳನ್ನು ನೋಡಬಾರದು ಎಂದು ಒತ್ತಾಯಿಸಿದರು. ಸನಾತನ ಧರ್ಮವನ್ನು ಅವಮಾನಿಸಿರುವ ನಟನಿಗೆ ತಕ್ಕ “ಪಾಠ ಕಲಿಸಬೇಕು” ಎಂದು ಹೇಳಿದರು.