ಓಮಿಕ್ರಾನ್ ವೈರಸ್ ಭೀತಿ: ಡಬ್ಲ್ಯುಎಚ್‌ಓ ವರದಿ ಆಧರಿಸಿ ನಿಯಂತ್ರಣ ಕ್ರಮ; ಸಚಿವ ಡಾ.ಕೆ. ಸುಧಾಕರ್‌

ಬೆಂಗಳೂರು: ಓಮಿಕ್ರಾನ್‌ ವೈರಸ್ ತೀವ್ರತೆ ಮತ್ತು ಪರಿಣಾಮಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಓ) ವರದಿ ಪ್ರಕಟವಾದ ಬಳಿಕವೇ ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣ ಕ್ರಮಗಳ ಕುರಿತು ನಿರ್ಧರಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಓಮಿಕ್ರಾನ್‌ ತಳಿಯ ವೈರಾಣುವಿನ ಹರಡುವಿಕೆ ಮತ್ತು ಅದರಿಂದ ಆರೋಗ್ಯದ ಮೇಲೆ ಆಗುವ ಹಾನಿ ಕುರಿತು ಈವರೆಗೂ ಅಧ್ಯಯನ ವರದಿ ಪ್ರಕಟವಾಗಿಲ್ಲ. ಡಿಸೆಂಬರ್‌ 1ರ ವೇಳೆಗೆ ಡಬ್ಲುಎಚ್‌ಓ ಅಧ್ಯಯನ ವರದಿ ಪ್ರಕಟವಾಗುವ ನಿರೀಕ್ಷೆ ಇದೆ. ಆ ಬಳಿಕವೇ ಹೊಸ ಕ್ರಮಗಳ ಕುರಿತು ಯೋಚಿಸಲಾಗುವುದು ಎಂದರು.

ಶಾಲಾ, ಕಾಲೇಜುಗಳು, ಸಾರ್ವಜನಿಕ ಕಾರ್ಯಕ್ರಮಗಳು ಸೇರಿದಂತೆ ಯಾವುದೇ ಚಟುವಟಿಕೆಯನ್ನು ನಿರ್ಬಂಧಿಸುವ ಪ್ರಸ್ತಾವ ಸದ್ಯಕ್ಕೆ ಇಲ್ಲ. ಡಬ್ಲ್ಯುಎಚ್‌ಓ ವರದಿ ಆಧಾರದಲ್ಲೇ ಕ್ರಿಸ್‌ಮಸ್‌, ಹೊಸ ವರ್ಷಾಚರಣೆಗೆ ಸಂಬಂಧಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇಂದಿನ ಮಾಹಿತಿ ಪ್ರಕಾರ 18 ರಾಷ್ಟ್ರಗಳಲ್ಲಿ ಓಮೈಕ್ರಾನ್‌ ಸೋಂಕು ಪತ್ತೆಯಾಗಿದೆ. ಈ ಕಾರಣದಿಂದ ಬೆಂಗಳೂರು ಮತ್ತು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು, ಬಂದರುಗಳ ಜತೆಗೆ ಅಂತರರಾಜ್ಯ ಗಡಿಗಳಲ್ಲಿ ಇನ್ನಷ್ಟು ಕಟ್ಟೆಚ್ಚರ ಅಗತ್ಯವಿದೆ ಎಂದು ತಿಳಿಸಿದರು.