ಕಾರ್ಕಳ: ಜಾನಪದ ಸಾಹಿತ್ಯ ಅನ್ನುವುದು ನಮ್ಮ ಹಿರಿಯರಿಂದ ಬಂದಿದ್ದು. ಜನ ಜೀವನದ ಜೊತೆಗೆ ಮಣ್ಣಿನ ಸಂಸ್ಕೃತಿಗೆ ಅನುಗುಣವಾಗಿ ಹುಟ್ಟಿದೆ. ಲಿಖಿತ ರೂಪದಲ್ಲಿ ಇಲ್ಲದೆ ಬಾಯಿಯಿಂದ ಬಾಯಿಗೆ ಹರಡಿರುವ ಅತ್ಯಂತ ಶ್ರೀಮಂತ ಸಾಹಿತ್ಯವಾಗಿದೆ. ಜಾನಪದ ಕಲೆ ಉಳಿಯಬೇಕು ಜಾನಪದ ಕಲೆಯ ಶ್ರೀಮಂತಿಕೆಯನ್ನು ಯುವ ಜನತೆಗೆ ತಿಳಿಸುವ ಕೆಲಸ ನಿರಂತರವಾಗಬೇಕು ಎಂದು ಕಾರ್ಕಳ ಶ್ರೀ ವೆಂಕಟರಮಣ ಎಜ್ಯೂಕೇಶನ್ ಟ್ರಸ್ಟ್ ಕಾರ್ಯದರ್ಶಿ ಕೆ.ಪಿ ಶೆಣೈ ಹೇಳಿದರು.
ಅವರು ಅಂಡಾರು ವಿಠಲ ರುಕ್ಮಿಣಿಕಿಣಿ ಸಾಂಸ್ಕೃತಿಕ ಸಭಾಂಗಣ ಎಸ್.ವಿ.ಟಿ ಕಾರ್ಕಳದಲ್ಲಿ ಜರುಗಿದ ಕನ್ನಡ ಜಾನಪದ ಪರಿಷತ್ ಬೆಂಗಳೂರು, ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ ಇದರ ಕಾರ್ಕಳ ತಾಲೂಕು ಘಟಕದ ಉದ್ಘಾಟನಾ ಸಮಾರಂಭ ಮತ್ತು ಪದಾಧಿಕಾರಿಗಳಿಗೆ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನೂತನ ತಾಲೂಕು ಅಧ್ಯಕ್ಷರಾಗಿ ದೇವದಾಸ್ ಹಾಗೂ ತಂಡ ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ.ಗಣೇಶ್ ಗಂಗೊಳ್ಳಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕನ್ನಡ ಜಾನಪದ ಪರಿಷತ್ ಕರಾವಳಿ ಜಿಲ್ಲೆಗಳ ವಿಭಾಗೀಯ ಸಂಚಾಲಕಿ ಡಾ. ಭಾರತಿ ಮರವಂತೆ ಶುಭಸಂಸನೆ ಗೈದರು.
ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ತಾಲೂಕಿನ ನಿಕಟಪೂರ್ವಾಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ, ಎಸ್.ವಿ.ಟಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮದಾಸ ಪ್ರಭು, ಎಸ್.ವಿ.ಟಿ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕ ಯೋಗೇಂದ್ರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಸಂಚಾಲಕ ಚಂದ್ರನಾಥ್ ಬಜಗೋಳಿ ಸ್ವಾಗತಿಸಿ,
ಗಣೇಶ್ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಮಂಜುನಾಥ್ ಕೆ. ಶಿವಪುರ ವಂದಿಸಿದರು.