ಹಿರಿಯಡಕ: ಭಾರತ ಮಾನವ ಸಂಪನ್ಮೂಲಭರಿತ ರಾಷ್ಟ್ರವಾಗಿದ್ದು ಅಪಾರ ಯುವ ಸಂಪತ್ತು ನಮ್ಮಲ್ಲಿದೆ. ಯುವಕರಿಗೆ ಅವಕಾಶ ಕೊಡುವ ಮೂಲಕ ಅವರನ್ನು ಬೆಳೆಸೋಣ ಎಂದು ಜ.ಪಿ.ವಿಶ್ವನಾಥ್ ಶೆಟ್ಟಿ ಹೇಳಿದರು.

ಹಿರಿಯಡಕದ ಶ್ರೀವೀರಭದ್ರಸ್ವಾಮಿ ದೇವಸ್ಥಾನದ ವಠಾರದಲ್ಲಿ ರವಿವಾರ ಚಂಡೀಗಢ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯಡಕ ರಾಜೇಶ್ ಪ್ರಸಾದ್ ಐಎಎಸ್ ಅವರಿಗೆ ಹುಟ್ಟೂರ ನಾಗರಿಕ ಸಮ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಬೆಳವಣಿಗೆಗೆ ಸಮಾಜದ ಕೊಡುಗೆ ಮತ್ತು ಪರಿಸರದ ಕೊಡುಗೆ ಅಪಾರವಾಗಿದೆ. ಸಮಾಜದ ಕೊಡುಗೆಯಿಂದ ಬೆಳೆದ ನಾವು ಸಮಾಜಕ್ಕೆ ಕಿಂಚಿತ್ತಾದರೂ ಕೊಡುಗೆಯನ್ನು ನೀಡುವುದು ಆವಶ್ಯಕ. ಈ ರೀತಿ ಸಮಾಜವನ್ನು ಬೆಳೆಸುವುದರ ಮೂಲಕ ನಮ್ಮ ಊರಿನ ಬೆಳವಣಿಗೆಯ ಜತೆಗೆ ರಾಷ್ಟ್ರದ ಬೆಳವಣಿಗೆಗೆ ನಮ್ಮ ಕೊಡುಗೆ ನೀಡಬೇಕು ಎಂದರು.

ಸಮ್ಮಾನ ಸ್ವೀಕರಿಸಿ ಮಾತನಾಡಿದ ರಾಜೇಶ್ ಪ್ರಸಾದ್, ದೇಶದಲ್ಲಿ ನಾನಾ ಹುದ್ದೆಗಳನ್ನು ಗಳಿಸಿ ಹಲವಾರು ಬಾರಿ ಸಮ್ಮಾನಗಳನ್ನು ಸ್ವೀಕರಿಸಿದ್ದರೂ ಹುಟ್ಟೂರ ಸಮ್ಮಾನಕ್ಕೆ ಮಿಗಿಲಾದದ್ದು ಯಾವುದು ಇಲ್ಲ ಇಂದಿಗೆ ನನ್ನ ಜೀವನ ಸಾರ್ಥಕವಾಯಿತು. ದೇಶದ ಗಡಿ ಪ್ರದೇಶವಾದ ಅರುಣಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸುವ ಅವಕಾಶ ನನಗೆ ದೊರೆತಿದೆ. ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ ನಗರಾಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯದರ್ಶಿಯಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಅವಕಾಶ ನನಗೆ ದೊರೆತಿದೆ. ಲಾಲ್ ಚೌಕಿನಲ್ಲಿ ದೇಶದ ರಾಷ್ಟ್ರಧ್ವಜವನ್ನು ಹಾರಾಡಿಸಲು ಭಯೋತ್ಪಾದಕರ ಬೆದರಿಕೆ ಇತ್ತು. 370ನೇ ವಿಧಿ ರದ್ದಾದ ಬಳಿಕ ವರ್ಷದ 365 ದಿನ ಲಾಲ್ ಚೌಕಿನಲ್ಲಿ ರಾಷ್ಟ್ರಧ್ವಜ ವನ್ನು ಹಾರಾಡಿಸುವ ಜವಾಬ್ದಾರಿ ನನ್ನ ಪಾಲಿಗೆ ದೊರೆತದ್ದು ನನ್ನ ಭಾಗ್ಯ ಎಂದರು.

ಬಾಲ್ಯದ ಶಿಕ್ಷಕರಾದ ಮಂಜುನಾಥ್ ಸೇರಿಗಾರ್, ಕೃಷ್ಣಬಾಯಿ, ರವಿರಾಜ್ ಶೆಟ್ಟಿ ಮತ್ತು ಮಂಜುನಾಥ್ ನಾಯಕ್ ಅವರನ್ನು ರಾಜೇಶ್ ಪ್ರಸಾದ್ ಸಮ್ಮಾನಿಸಿದರು.
ಮುಂಬಯಿಯ ಚಾರ್ಟೆಡ್ ಅಕೌಂಟೆಂಟ್ ಎನ್. ಬಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಹೆ ಮಣಿಪಾಲದ ಸಹಕುಲಪತಿ ಡಾ.ಶರತ್ ಕುಮಾರ್ರಾವ್ ಕೆ., ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾಜಿ ಸಚಿವ ವಿನಯ ಕುಮಾರ್ಸೊರಕೆ, ರಾಜೇಶ್ ಪ್ರಸಾದ್ ಸಹೋದರ ಅಪ್ಪು ನಾಯ್ಕ ಪತ್ನಿ ಉಷಾ ರಾಜೇಶ್ ಪ್ರಸಾದ್ ಉಪಸ್ಥಿತರಿದ್ದರು.


ರಂಜನ್ ಕೇಳ್ಕರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀನಿವಾಸ್ ರಾವ್ ವಂದಿಸಿ, ನಳಿನಾ ದೇವಿ ಎಂ. ಆರ್. ನಿರ್ವಹಿಸಿದರು.
ಈ ಮೊದಲು ದೇವಾಡಿಗ ಭವನ ದಿಂದ ಪೂರ್ಣಕುಂಭ ಸ್ವಾಗತದೊಂದಿಗೆ ರಾಜೇಶ್ ಪ್ರಸಾದ್ ದಂಪತಿಯನ್ನು ಮೆರವಣಿಗೆಯಲ್ಲಿ ಸಭಾ ವೇದಿಕೆಗೆ ಬರಮಾಡಿಕೊಳ್ಳಲಾಯಿತು.















