ಮಲ್ಪೆ: ಮಲ್ಪೆ ಬೀಚ್‌ನಲ್ಲಿ ಯೂಟ್ಯೂಬರ್ ಜೊತೆ ಸೈಂಟ್ ಮೇರಿಸ್ ದ್ವೀಪದಲ್ಲಿ ಸಿಬ್ಬಂದಿಗಳು ಅನುಚಿತವಾಗಿ ವರ್ತಿಸಿದ್ದಾರೆ ಎನ್ನುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಲ್ಪೆ ಬೀಚ್‌ನ ಗುತ್ತಿಗೆದಾರ ಸುದೇಶ್ ಶೆಟ್ಟಿ ಸ್ಪಷ್ಟೀಕರಣ ನೀಡಿದ್ದು, ವಿಡಿಯೋ ಪ್ರಕಟಿಸಿದ ಯೂಟ್ಯೂಬರ್ ಉದ್ದಟತನ ಪ್ರರ್ದಶಿಸಿದ ಹಿನ್ನೆಲೆ ಸಿಬ್ಬಂದಿಗಳು ಆ ಯೂಟ್ಯೂಬರ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಹೊರತು, ಯಾವುದೇ ದುರುದ್ದೇಶದಿಂದ ಅಲ್ಲ ಎಂದಿದ್ದಾರೆ.
ಪ್ರಥಮವಾಗಿ ಯೂಟ್ಯೂಬರ್ ಬಳಿ ಕ್ಯಾಮೆರಾ ಶುಲ್ಕ ಪಾವತಿಸಿದ ರಶೀದಿ ಇರಲಿಲ್ಲ. ಈ ಹಿನ್ನೆಲೆ ಕ್ಯಾಮೆರಾ ಒಳಗೆ ಬಿಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿತ್ತು. ಮಲ್ಪೆ ಬೀಚ್‌ನಲ್ಲಿ ನಡೆಸಿದ ಪ್ರತಿ ವ್ಯವಹಾರಕ್ಕೆ ರಶೀದಿಯನ್ನು ನೀಡಲಾಗುತ್ತದೆ. ಯೂಟ್ಯೂಬರ್ ಯುಪಿಐ ಪಾವತಿ ಮಾಡಲಾಗಿದೆ ಎಂದು ಹೇಳಿದರೂ, ರಶೀದಿ ಇಲ್ಲದೆ ಇರುವುದರಿಂದ ಕ್ಯಾಮೆರಾದೊಂದಿಗೆ ಒಳ ಪ್ರವೇಶಕ್ಕೆ ಅನುಮತಿ ನೀಡಿಲ್ಲ. ಈ ದ್ವೀಪ ಎನ್ನುವುದು ಜೀವ ಸೂಕ್ಷ್ಮ ವಲಯವಾಗಿರುವುದರಿಂದ ಬ್ಯಾಗ್ ಜೊತೆ ಒಳ ಪ್ರವೇಶಕ್ಕೆ ಅನುಮತಿ ಇಲ್ಲ. ಈ ಯೂಟ್ಯೂಬರ್ ಅನುಮತಿ ಇಲ್ಲದೆ ಒಳಪ್ರವೇಶಕ್ಕೆ ಯತ್ನಿಸಿದ್ದು, ಈ ಸಂದರ್ಭ ಸಿಬ್ಬಂದಿಗಳು ತಡೆದ ಬಳಿಕ ಲಗೇಜ್ ರೂಮ್‌ನಲ್ಲಿ ವಸ್ತುಗಳನ್ನು ಇಟ್ಟು ಒಳ ಹೋಗುವುದಕ್ಕೆ ರಾಜಿಯಾಗಿದ್ದರು. ಈ ಸಂದರ್ಭ ಯೂಟ್ಯೂಬರ್ ಜೊತೆಗಿದ್ದ ವ್ಯಕ್ತಿ ಸಿಬ್ಬಂದಿಯ ಅನುಮತಿ ಇಲ್ಲದೆ ಫೋಟೊ ತೆಗೆಯುವುದಕ್ಕೆ ಯತ್ನಿಸಿದ್ದು, ಇದನ್ನು ಸಿಬ್ಬಂದಿ ವಿರೋಧಿಸಿದ್ದಾರೆ.
ಅಲ್ಲದೆ, ಯೂಟ್ಯೂಬರ್ ಇದನ್ನು ವಿಡಿಯೋ ಮಾಡಿ ಬೀಚ್‌ನ ವಿರುದ್ದ ಪ್ರಚಾರ ಮಾಡುವುದಾಗಿ ಬೆದರಿಕೆಯನ್ನು ಕೂಡ ಹಾಕಿದ್ದಾರೆ. ಈ ಕಾರಣಕ್ಕಾಗಿ ನಮ್ಮ ಸಿಬ್ಬಂದಿ ಆಕ್ಷೇಪಿಸಿದ್ದಾರೆ ಹೊರತು ಇನ್ಯಾವ ಕಾರಣದಿಂದಲ್ಲ.
ಒತ್ತಾಯಪೂರ್ವಕವಾಗಿ ನಮ್ಮ ಸಿಬ್ಬಂದಿಯ ಅನುಮತಿ ಇಲ್ಲದೆ ಫೋಟೋ ತೆಗೆಯುವುದಕ್ಕೆ ಹೋಗಿದ್ದು, ಈ ಹಿನ್ನೆಲೆ ನಮ್ಮ ಸಿಬ್ಬಂದಿಗಳು ವಿರೋಧಿಸಿದ್ದಾರೆ ಹೊರತು ಬೇರಾವ ಉದ್ದೇಶದಿಂದ ಅಲ್ಲ.
ಸಾಮಾಜಿಕ ಜಾಲತಾಣದಲ್ಲಿ ಪ್ರಸರಣಗೊಂಡ ದೃಶ್ಯಾವಳಿಯನ್ನು ತಿರುಚಲಾಗಿದ್ದು, ನಮ್ಮ ಸಿಬ್ಬಂದಿ ವಿರೋಧ ವ್ಯಕ್ತಪಡಿಸಿರುವ ದೃಶ್ಯಗಳನ್ನು ಮಾತ್ರ ಪ್ರಕಟಿಸಲಾಗಿದೆ. ಯೂಟ್ಯೂಬರ್ ಮತ್ತು ಜತೆಗಿದ್ದ ವ್ಯಕ್ತಿ ನಮ್ಮ ಸಿಬ್ಬಂದಿಯನ್ನು ಅನಗತ್ಯ ನಿಂದಿಸಿದ ವಿಡಿಯೋವನ್ನು ಅವರು ಪ್ರಕಟಿಸಿಲ್ಲ.
ಸೈಂಟ್ ಮೇರಿಸ್ ದ್ವೀಪ ಎನ್ನುವುದು ಜೀವ ವೈವಿದ್ಯಮಯ ತಾಣ. ಇಲ್ಲಿನ ರಕ್ಷಣೆ ಹೊಣೆ ನಮ್ಮ ಸಂಸ್ಥೆಯ ಮೇಲಿದ್ದು, ಈ ಹಿನ್ನೆಲೆ ದ್ವೀಪದಲ್ಲಿ ಕೆಲವೊಂದು ಕಠಿಣ ನಿಯಮಗಳನ್ನು ಪ್ರವಾಸಿಗರ ಮೇಲೆ ಹೇರಲಾಗಿದೆ. ಇಲ್ಲಿ ಪ್ರವಾಸಿಗರ ಅನುಚಿತ ವರ್ತನೆಯನ್ನು ನಿಯಂತ್ರಿಸುವುದು ನಮ್ಮ ಸಿಬ್ಬಂದಿಗಳ ಹೊಣೆಯಾಗಿದೆ. ಅಲ್ಲದೆ ಸರಕಾರದ ಸ್ಪಷ್ಟ ಸೂಚನೆ ಇರುವುದರಿಂದ ಪರಿಸರ ಸ್ನೇಹಿ ವಸ್ತುಗಳಿಂದ ಸೈಂಟ್ ಮೇರಿಸ್ ದ್ವೀಪವನ್ನು ಅಭಿವೃದ್ಧಿ ಪಡಿಸಲಾಗಿದೆ. ಅಭಿವೃದ್ಧಿ ಸಂದರ್ಭ ಪ್ರವಾಸಿಗರ ಸುರಕ್ಷತೆಗೆ ಕೂಡ ಅಷ್ಟೇ ಮುತುವರ್ಜಿ ವಹಿಸಲಾಗಿದೆ ಎಂದು ಸುದೇಶ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.